

ಚಾಮರಾಜನಗರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಜಿಲ್ಲೆಗೆ ಅವರ ಸೇವೆ ಅಗತ್ಯವಾಗಿದೆ ಎಂದು ದಲಿತ ಮುಖಂಡ ಬಸವನಪುರ ರಾಜಶೇಖರ್ ಹೇಳಿದರು.
ಜಿಲ್ಲೆಯಲ್ಲಿ ಹಲವಾರು ದಕ್ಷ, ಪ್ರಮಾಣಿಕ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಅಂತವರ ಸಾಲಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಸೇರುತ್ತಾರೆ. ಅವರ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಹನೂರಿನ ರಾಮಾಪುರ ಮತ್ತು ಸಂತೇಮರಹಳ್ಳಿ ಆಸ್ಪತ್ರೆಗಳು ಮೇಲ್ದರ್ಜೆಗೆ ಏರಿದೆ. ಅಂತಹ ಅಧಿಕಾರಿಯನ್ನು ವಿನಾಃಕಾರಣ ವರ್ಗಾವಣೆ ಮಾಡುವುದು ಸರಿಯಲ್ಲ. ಜಿಲ್ಲೆಯ ಶಾಸಕರು ಹಾಗೂ ರಾಜ್ಯ ಸರ್ಕಾರ ಇದನ್ನು ಗಮನಹರಿಸಿ ಅವರ ವರ್ಗಾವಣೆ ಶಿಾರಸ್ಸನ್ನು ರದ್ದುಗೊಳಿಸಬೇಕು ಎಂದು ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಡಾ.ಕೆ.ಎಂ.ವಿಶ್ವೇಶ್ವರಯ್ಯ ಡಿಎಚ್‌ಓ ಆಗಿ ಅಧಿಕಾರವಹಿಸಿಕೊಂಡ ದಿನಗಳಿಂದಲೂ ರೋಗಿಗಳ ಸಂಕಷ್ಟಕ್ಕೆ ಮತ್ತು ಇಲಾಖೆಯ ಸಮಸ್ಯೆಗಳಿಗೆ ತಕ್ಷಣಕ್ಕೆ ಸ್ಪಂದನೆ ಮಾಡುತ್ತಾರೆ. ಹನೂರು ಭಾಗದ ಕಾಡಂಚಿನ ಪ್ರದೇಶದಲ್ಲಿ ವಾಸಿಸುವ ಜನರ ಚಿಕಿತ್ಸೆಗೆ ನೆರವಾಗಿದ್ದಾರೆ. ಇಂತಹ ಅಧಿಕಾರಿಯ ವರ್ಗಾವಣೆಗೆ ಶಿಫಾರಸ್ಸು ಆಗಿರುವುದು ನಮಗೆ ನೋವು ತಂದಿದೆ. ಅವರನ್ನು ಜಿಲ್ಲೆಯಲ್ಲೇ ಮುಂದುವರಿಯಬೇಕು ಎಂಬುದು ನಮ್ಮ ಆಶಯವಾಗಿದೆ. ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಉಪ್ಪಾರ ಸಮುದಾಯದ ಮುಖಂಡ ಜಿ.ಎಂ.ಶಂಕರ್, ಕೆಸ್ತೂರು ಮರಪ್ಪ, ಬಿಎಸ್ಪಿ ಮುಖಂಡ ರಾಮಸಮುದ್ರ ಚಿನ್ನಸ್ವಾಮಿ, ಮಂಜುನಾಥ್, ಸಂತೇಮರಹಳ್ಳಿ ರಾಜು, ಚಿನ್ನಸ್ವಾಮಿ ಹಾಜರಿದ್ದರು.