ಟಿಪ್ಪರ್ ಮತ್ತು ಎತ್ತಿನಗಾಡಿ ನಡುವೆ ಅಪಘಾತ

09chn5
Published on

ಕೊಳ್ಳೇಗಾಲ: ಟಿಪ್ಪರ್‌ಲಾರಿ ಮತ್ತು ಎತ್ತಿನ ಗಾಡಿ ನಡುವೆ ಅಪಘಾತ ಸಂಭವಿಸಿ ಲಾರಿ ಜಖಂಗೊಂಡಿದ್ದರೆ, ಎತ್ತಿನ ಕೊಂಬು ಮುರಿದಿದೆ.

ತಾಲೂಕಿನ ಚಿಕ್ಕಿಂದುವಾಡಿ ಮುಖ್ಯರಸ್ತೆಯಲ್ಲಿ ರಾಮನಗರದ ಜಾಬೀರ್ ಖಾನ್ ಎನ್ನುವವರಿಗೆ ಸೇರಿದ ಟಿಪ್ಪರ್‌ಲಾರಿ ಹಾಗೂ ಹಿಂದ್ವಾಡಿ ನಿಂಗರಾಜು ಎಂಬುವವರ ಎತ್ತಿನಗಾಡಿ ನಡುವೆ ಶನಿವಾರ ಮುಂಜಾನೆ ಈ ಅನಾಹುತ ಉಂಟಾಗಿದೆ. ಬೆಳಿಗ್ಗೆ 3 ಗಂಟೆ ಸಮಯದಲ್ಲಿ ಹನೂರಿಗೆ ಹೋಗುತ್ತಿದ್ದ ಟಿಪ್ಪರ್‌ಲಾರಿ, ಮಧುವನಹಳ್ಳಿ ಸಮೀಪದಲ್ಲಿ ಕಬ್ಬು ಲೋಡ್ ಮಾಡಲು ಹೋಗುತ್ತಿದ್ದ ಎತ್ತಿನಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತಿನ ಕೊಂಬು ಮುರಿದು ತೀವ್ರ ರಕ್ತಸ್ತ್ರಾವ ಉಂಟಾಗಿದೆ.

ಎತ್ತಿನ ಗಾಡಿ ಡಿಕ್ಕಿ ಹೊಡೆದು ಮರಕ್ಕೆ ಗುದ್ದಿದ ಟಿಪ್ಪರ್‌ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಲಾರಿಯ ಒಳಗೆ ಸಿಲುಕಿದ್ದ ಚಾಲಕನನ್ನು ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿಗಳು ಹಾಗೂ ಸ್ಥಳೀಯರು ಹೊರತೆಗೆಯುವಲ್ಲಿ ಯಶಸ್ವಿಯಾದರು.
ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net