

ಚಾಮರಾಜನಗರ: ಸರ್ಕಾರಗಳು ಎಸ್ಸಿ/ಎಸ್ಟಿ ಸಮುದಾಯಗಳಿಗೆ ಮೀಸಲು ಇಟ್ಟಿರುವ ಅನುದಾನ, ಅವರ ಅಭಿವೃದ್ಧಿಗೆ ಬಳಕೆ ಯಾಗುತ್ತಿಲ್ಲ ಎಂದು ಯೋಜನಾ ಇಲಾಖೆ ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ ಡಿ.ಚಂದ್ರಶೇಖರಯ್ಯ ವಿಷಾದ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ತು ಮತ್ತು ನಿಸರ್ಗ ಪಬ್ಲಿಕೇಶನ್ಸ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಯುವ ಸಾಹಿತಿ ಮಹೇಶ್ ಇರಸವಾಡಿ ರಚನೆಯ ಬಯಲೊಳಗಿನ ಬದುಕು ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಸ್ಸಿಪಿ/ಟಿಎಸ್ಪಿ ಅನುದಾನ ದಲಿತ ಸಮುದಾಯಗಳಿಗೆ ತಲುಪದೇ ಪುಸ್ತಕದ ಶೀರ್ಷಿಕೆಯಂತೆಯೇ ಬಯಲಲ್ಲೇ ಉಳಿದಿದೆ. ಈ ವರೆಗೂ ದೇಶದಲ್ಲಿ 25 ಎಕರೆಗಿಂತಲೂ ಹೆಚ್ಚಾದ ಕೃಷಿ ಜಮೀನು ಹೊಂದಿರುವವರು ದಲಿತರು ಇಲ್ಲ, ಅಡಗು ಸ್ಥಾಪನೆ, ಐಟಿಬಿಟಿ ಕಂಪನಿ, ಹೋಟೆಲ್ ಉದ್ಯಮ ತಳ ಸಮುದಾಯಗಳ ಒಡೆತನದಲ್ಲಿ ಇಲ್ಲ. ಆಗಾಗಿ ಸಂವಿಧಾನ ಜಾರಿಯಾಗಿ 75 ವರ್ಷಗಳು ಕಳೆದರೂ ದಲಿತರ ಬದುಕು ಬಯಲಿನಲ್ಲೇ ಇದೆ ಎಂಬುದನ್ನು ಈ ಪುಸ್ತಕ ಸಾರುತ್ತದೆ ಎಂದು ತಿಳಿಸಿದರು.
ನಮ್ಮನ್ನು ಆಳುವ ಸರ್ಕಾರಗಳು ನಮ್ಮಿಂದ ನಮ್ಮನ್ನೇ ನಾಶಗೊಳಿಸುವಂತಹ ಹುನ್ನಾರವನ್ನು ರೂಪಿಸುತ್ತಿದ್ದಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗಿಂತಲೂ, ವೈಯಕ್ತಿಕ ಹಿತಾಶಕ್ತಿಗಳಿಗೆ ದಲಿತ ಸಂಘಟನೆಗಳ ಮುಖಂಡರು ಬಲಿಯಾಗುತ್ತಿದ್ದಾರೆ. ಅಂಬೇಡ್ಕರ್ ಚಿಂತನೆಗಳ ಅಡಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಸಾಗಲಿಲ್ಲ ಅಂದರೆ, ನಾವೆಲ್ಲರೂ ಇನ್ನೂ ಮುಂದೆಯೂ ಬಯಲಿನಲ್ಲೇ ಉಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪುಸ್ತಕ ಕುರಿತು ಸಹಾಯಕ ಪ್ರಾಧ್ಯಾಪಕ ಡಾ.ಕೃಷ್ಣಮೂರ್ತಿ ಚಮರಂ ಮಾತನಾಡಿ, ಈ ನೆಲದಲ್ಲಿ ಇರುವ ಸಿದ್ಧ ಮಾದರಿಗಳನ್ನು ಹೊಡೆದು, ಬುದ್ಧ ಮಾದರಿಗಳನ್ನು ನಿರ್ಮಿಸಬೇಕು. ಈ ಹಿನ್ನೆಲೆಯಲ್ಲಿ ಯುವ ಕವಿ ಮಹೇಶ್ ಇರಸವಾಡಿ ತಮ್ಮ ಕಾವ್ಯಗಳನ್ನು ಕಟ್ಟಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಕಾವ್ಯಗಳು ಮತ್ತೊಬ್ಬರ ಒಲೈಕೆಗಷ್ಟೇ ಸೀಮಿತವಾಗಿವೆ, ಆದರೆ ಈ ಕೃತಿ ಅದಕ್ಕೆ ಹೊರತಾಗಿದೆ. ವಿಧ್ಯೆ ಪಟ್ಟಭದ್ರರ ವಶದಲ್ಲಿದ್ದ ಸಂಧರ್ಭದಲ್ಲಿ ಕಾವ್ಯವನ್ನು ಅವರ ರಾಜ ಮಹಾರಾಜರನ್ನು ಹೊಗಳಿ ವಿಜೃಂಭಿಸಲು ಬಳಸುತ್ತಿದ್ದರು. ಆದರೆ ಶೋಷಿತರಿಗೆ ಶಿಕ್ಷಣ ದೊರಕಿದ ನಂತರ ಅವರು ತಮ್ಮ ಮೇಲಾಗುವ ದೌರ್ಜನ್ಯ, ಹಿಂಸೆಯನ್ನು ಪ್ರತಿರೋಧಿಸುವ ಅಸವಾಗಿ ಕಾವ್ಯವನ್ನು ಬಳಸಿಕೊಂಡರು. ಬಹುಶಃ ಒಂದು ಸಾಹಿತ್ಯ ಗಟ್ಟಿಗೊಳ್ಳಬೇಕಾದರೆ ಅದು ತಳ ಸಮುದಾಯದ ನೋವುಗಳನ್ನು ಧ್ವನಿಸಬೇಕು ಹಾಗೂ ಆ ನೋವಿಗಳಿಗೆ ಪರಿಹಾರವಾಗಬೇಕು. ಈ ನಿಟ್ಟಿನಲ್ಲಿ ಬಯಲೊಳಗಿನ ಬದುಕು ಕೃತಿ ಸಾಕಷ್ಟು ಪರಿಹಾರವನ್ನು ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ದಕ್ಷಿಣ ವಲಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕಿ ಲಕ್ಷ್ಮಮ್ಮ, ಹಿರಿಯ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಸೋಮಶೇಖರ್ ಬಿಸಲವಾಡಿ, ಕವಿ ಮಹೇಶ್ ಇರಸವಾಡಿ ಹಾಗೂ ಇತರರು ಉಪಸ್ಥಿತರಿದ್ದರು.