

ಚಾಮರಾಜನಗರ: ಗಣಪತಿ ಪ್ರತಿಷ್ಠಾಪನೆಗೆ ಸ್ಥಳ ಅನುಮತಿ ಪಡೆಯಲೇ ಬೇಕು, ವಿದ್ಯುತ್ ಇಲಾಖೆ, ಅಗ್ನಿಶಾಮಕ ಇಲಾಖೆ ಮತ್ತು ನಗರಸಭೆಯಿಂದ ಅನುಮತಿ ಕಡ್ಡಾಯ, ಯಾವುದೇ ಕಾರಣಕ್ಕೂ ಡಿಜೆಗೆ ಅನುಮತಿ ಇಲ್ಲ ಎಂದು ಚಾಮರಾಜನಗರ ಪೊಲೀಸ್ ಉಪವಿಭಾಗಾಧಿಕಾರಿ ಲಕ್ಷ್ಮಯ್ಯ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಪಟ್ಟಣ ಪೋಲೀಸ್ ಠಾಣೆ ಸಹಯೋಗದಲ್ಲಿ ಶನಿವಾರ ಗಣಪತಿ ಪ್ರತಿಷ್ಠಾಪನೆ, ಬಿಡುಗಡೆ ಸಂಬಂಧ ಸಲಹೆ, ಸೂಚನೆ ಮತ್ತು ಸಾರ್ವಜನಿಕರಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಗರದ ವಿವಿಧ ಬಡಾವಣೆಗಳಲ್ಲಿ 50-60 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ ಎಂದು ಗಮನಕ್ಕೆ ಬಂದಿದೆ. ಸರ್ಕಾರ ಈ ಬಾರಿಯ ಗಣೇಶ ಪ್ರತಿಷ್ಠಾಪನೆ ಸಂಬಂಧ ಅನೇಕ ಸೂಚನೆಗಳನ್ನು ನೀಡಿದೆ. ಗಣಪತಿ ಪ್ರತಿಷ್ಠಾಪನೆ ಮಂಡಳಿಯನ್ನು ರಚನೆ ಮಾಡಿಕೊಂಡು ಗಣಪತಿ ಕೂರಿಸುವ ಸ್ಥಳದ ಅನುಮತಿ ಪಡೆದುಕೊಳ್ಳಬೇಕು. ಖಾಸಗಿ ಜಾಗವಾದರೆ ಅವರಿಂದ ಮತ್ತು ಸರ್ಕಾರಿ ಜಾಗವಾದರೆ ನಗರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ವಿದ್ಯುತ್ ಇಲಾಖೆ, ಅಗ್ನಿಶಾಮಕ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ತಾತ್ಕಾಲಿಕವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಯಾವುದೇ ಕಾರಣಕ್ಕೂ ಡಿಜೆಗೆ ಅನುಮತಿ ಇಲ್ಲ. ಕಾನೂನು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಸೌಹಾರ್ದತೆಯಿಂದ ಗಣಪತಿ ಹಬ್ಬವನ್ನು ಆಚರಣೆ ಮಾಡೋಣ ಎಂದರು.
ಜಿಲ್ಲೆ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿದೆ, ಈ ವರೆಗೂ ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ. ಗಣಪತಿ ಮಂಡಳಿಯ ಸದಸ್ಯರು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ನಿಯಮಗಳನ್ನು ಉಲ್ಲಂಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಯ ವೇಳೆ ಬೇರೆ ಸಮುದಾಯಗಳಿಗೆ ತೊಂದರೆ ಕೊಡಬಾರದು. ಒಂದು ವೇಳೆ ಕಾನೂನು ಮೀರಿ ನಡೆದುಕೊಂಡರೆ, ಯಾರು ಪ್ರತಿಷ್ಠಾಪನೆ ಸಮಿತಿಯ ಮುಖ್ಯಸ್ಥರಾಗಿರುತ್ತಾರೋ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ.ಕೆ.ರಾಜೇಶ್ ಮಾತನಾಡಿ, ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ಈ ಬಗ್ಗೆ ಯುವಕರು ಎಚ್ಚರಿಕೆ ವಹಿಸಬೇಕು. ಕಾನೂನಿನ ಉಲ್ಲಂಘನೆ ಮಾಡುವುದು, ಅಸಭ್ಯವಾಗಿ ನಡೆದುಕೊಳ್ಳುವುದು, ಇನ್ನಿತರೆ ಸಮುದಾಯದವರನ್ನು ಅವಹೇಳನ ಮಾಡುವಂತಹ ಕೆಲಸ ಮಾಡಬಾರದು. ಗಣಪತಿ ಪ್ರತಿಷ್ಠಾಪನೆ ಶಕ್ತಿ ಪ್ರದರ್ಶನ ಆಗಬಾರದು. ನಿನಾಃಕಾರಣ ಕಾನೂನು ಉಲ್ಲಂಘನೆ ಮಾಡಿದರೆ, ಯಾವುದೇ ಅವಘಡಗಳು ಸಂಭವಿಸಿದರೆ ಅನುಮತಿ ಪಡೆದು ಕೊಳ್ಳುವವರು ನೇರ ಜವಾಬ್ದಾರಿ ಆಗುತ್ತಾರೆ ಎಂದು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಡಿವೈಎಸ್‌ಪಿ ಎ.ಆರ್.ರಘು, ಸಬ್ ಇನ್ಸ್‌ಪೆಕ್ಟರ್ ಸುನೀಲ್, ವಿವಿಧ ಬಡಾವಣೆಯ ಕೋಮಿನ ಮುಖಂಡರು, ಶ್ರೀ ಗಣೇಶ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಭಾಗವಹಿಸಿದ್ದರು.