

ಚಾಮರಾಜನಗರ: ಯಾವುದೇ ಒಬ್ಬ ವ್ಯಕ್ತಿಯ ಏಳಿಗೆಯಲ್ಲಿ ಗುರುವಿನ ಪಾತ್ರ ಪ್ರಮುಖವಾಗಿರುತ್ತದೆ ಎಂದು ಪೂರ್ವ ಪೊಲೀಸ್ ಠಾಣೆ ಇನ್ಸ್‌ಫೆಕ್ಟರ್ ಶ್ರೀಕಾಂತ್ ಹೇಳಿದರು.
ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಪ್ರೌಢಶಾಲೆ ತಾಲೂಕು ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಬಾಲಕ ಹಾಗೂ ಬಾಲಕಿಯರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಸಹ ಸರ್ಕಾರಿ ಶಾಲೆಯಲ್ಲಿ ಓದಿ ಈ ಹಂತಕ್ಕೆ ಬಂದಿದ್ದೇನೆ. ಸರ್ಕಾರಿ ಶಾಲೆಗಳೆಂದರೆ ನೆನಪಿನ ಬುತ್ತಿ. ಅದನ್ನು ಮೆಲಕು ಹಾಕಲು ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಮಕ್ಕಳು ಕಷ್ಟಪಟ್ಟು ಓದದೆ ಇಷ್ಟಪಟ್ಟು ಅಭ್ಯಾಸದಲ್ಲಿ ನಿರತರಾಗಬೇಕು. ಪ್ರೌಢ ಶಾಲೆ ಹಂತ ಮಾನಸಿಕ ಹಾಗೂ ದೈಹಿಕವಾಗಿ ಬದಲಾಗುವ ಘಟ್ಟ. ಈ ವಯಸ್ಸಿನಲ್ಲಿ ವ್ಯಾಸಂಗದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು.
ಮಕ್ಕಳ ಯಶಸ್ಸಿನಲ್ಲಿ ಗುರು ಹಾಗೂ ಗುರಿ ಇರಲೇಬೇಕು. ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸಲು ನಿರಂತರ ಪ್ರಯತ್ನ ಮಾಡಬೇಕು. ಯಾರು ಕಸಿದುಕೊಳ್ಳಲಾಗದ ಆಸ್ತಿ ಎಂದರೆ ಅದು ವಿದ್ಯೆ ಮಾತ್ರ, ಇದನ್ನು ಎಲ್ಲಾ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಶಾಲೆಯ ಉಪ ಪ್ರಾಂಶುಪಾಲೆ ನಾಗರತ್ನ ಮಾತನಾಡಿ, ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಸರ್ಕಾರಿ ಶಾಲೆಗಳೆಂದರೆ ಕೇವಲ ಬಡವರಿಗೆ ಮಾತ್ರ ಎಂಬ ಮನೋಭಾವ ಬದಲಾಗಬೇಕು ಎಂದರು.
ಶಿಕ್ಷಕರ ಸಂಘದ ಜಿಲ್ಲಾ ಸಂಚಾಲಕ ಮಲ್ಲೇಶ್, ಶಿಕ್ಷಕರಾದ ವೆಂಕಟಾಚಲ, ಸುಧಾಕರ್, ಮಂಜುಳಾ, ಸುಜಾತ, ಸೌಮ್ಯ ದೈಹಿಕ ಶಿಕ್ಷಣ ಶಿಕ್ಷಕ ನಟರಾಜ್, ಪೋಲಿಸ್ ಇಲಾಖೆಯ ಚಂದ್ರು, ಮಹಾದೇವಸ್ವಾಮಿ, ಫ್ರೆಂಡ್ಸ್ ಕ್ಲಬ್ ಸದಸ್ಯರು ಭಾಗವಹಿಸಿದ್ದರು.