

ಕೊಳ್ಳೇಗಾಲ: ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಲಾರಿ ಮಾಲೀಕ ಹಾಗೂ ಮಾಲೀಕ ಮೃತಪಟ್ಟಿರುವ ದುರಂತ ಸಂಭವಿಸಿದೆ.
ಹನೂರು ತಾಲೂಕಿನ ಮೂಡಹಳ್ಳಿ ಗ್ರಾಮದ ಬಳಿ ಗುಂಡಾಲ್ ಜಲಾಶಯಕ್ಕೆ ಹೋಗುವ ರಸ್ತೆಯಲ್ಲಿ ಶನಿವಾರ ಮುಂಜಾನೆ ಕಬ್ಬು ತುಂಬಿಕೊಂಡು ತೆರಳುವಾಗ ಕಬ್ಬಿನ ಲಾರಿಗೆ ವಿದ್ಯುತ್ ತಂತಿ ತಗುಲಿ ಮಳವಳ್ಳಿ ತಾಲೂಕಿನ ಹಂಗ್ರಾಪುರ ಗ್ರಾಮದ ನಿವಾಸಿ ಚಾಲಕ ಮಹದೇವಸ್ವಾಮಿ ಆಲಿಯಾಸ್ ಚಿನ್ನಸ್ವಾಮಿ(35), ಪ್ರಕಾಶ್(45) ಅಸು ನೀಗಿದ್ದಾರೆ.
ತಾಲೂಕಿನ ಗುಂಡಾಲ್ ಜಲಾಶಯದ ಸಮೀಪದಲ್ಲೇ ಇರುವ ಸಿದ್ದಪ್ಪ ಎಂಬುವವರ ಜಮೀನಿನಲ್ಲಿ ಕಬ್ಬು ತುಂಬಿಕೊಂಡು, ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗೆ ತೆರಳುವಾಗ ದುರ್ಗಮ್ಮನ ದೇವಸ್ಥಾನ ಹತ್ತಿರದ ರಸ್ತೆ ಬದಿಯಲ್ಲೇ ಹಾದು ಹೋಗಿರುವ ಹೈಪವರ್ ವಿದ್ಯುತ್ ತಂತಿ ಕಬ್ಬಿಗೆ ತಗುಲಿದೆ. ಈ ವೇಳೆ ಚಾಲಕ ಮತ್ತು ಕ್ಲಿನರ್ ಇಬ್ಬರೂ ಲಾರಿಯಿಂದ ಕೆಳಗಿಳಿದು ತಪ್ಪಿಸಿಕೊಳ್ಳಲು ಪ್ರಯುತ್ನ ಮಾಡಿದರೂ ಕೂಡ ಸಾಧ್ಯವಾಗದೇ, ಹೈ ಪವರ್ ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುಂಡಾಲ್ ಜಲಾಶಯದ ರಸ್ತೆಯಲ್ಲಿ ವಿದ್ಯುತ್ ತಂತಿಗಳು ಜೋತ್ತು ಬಿದ್ದಿರುವುದು, ಅವಘಡಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.