

ಚಾಮರಾಜನಗರ: ಸಮಾಜದಲ್ಲಿ ಅತ್ಯಂತ ಪ್ರಮುಖವಾಗಿರುವ ಶಿಕ್ಷಣವನ್ನು ಪ್ರತಿಯೊಬ್ಬರೂ ಪಡೆದು ಉತ್ತಮ ಸ್ಥಾನ ಪಡೆಯಬೇಕೆಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಸಲಹೆ ನೀಡಿದರು.
ನಗರದ ಜಿಲ್ಲಾ ಕಾರಾಗೃಹ ಆವರಣದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಸಾಕ್ಷರತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಪಡೆಯಲು ಎಲ್ಲರಿಗೂ ಅವಕಾಶಗಳಿವೆ. ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು. ಓದು ಬರಹ ಪ್ರತಿಯೊಬ್ಬರೂ ಕಲಿಯಬೇಕು. ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಉತ್ತೇಜಿಸಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸಲು ಪ್ರೋತ್ಸಾಹ ನೀಡಬೇಕು. ಕಾರಾಗೃಹದಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಬೇಕು. ಜ್ಞಾನಾರ್ಜನೆಗೆ ಹೆಚ್ಚಿನ ಅವಕಾಶ ಮಾಡಿಕೊಡಬೇಕು. ಯುವಕರು ಕಾರಾಗೃಹದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರಿಗೆ ಕಂಪ್ಯೂಟರ್ ತರಬೇತಿ ನೀಡಬೇಕು. ಇದರಿಂದ ಯುವಕರು ಇಲ್ಲಿಂದ ಹೊರಹೋದ ಮೇಲೆ ಬದುಕು ನಿರ್ವಹಣೆಗೆ ಅನುಕೂಲವಾಗಲಿದೆ ಎಂದರು.
ಮೈಸೂರಿನ ನಿವೃತ್ತ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ.ಕೆ.ಶಂಕರೇಗೌಡ ಮಾತನಾಡಿ, ಅನಕ್ಷರಸ್ಥರನ್ನು ಗುರುತಿಸಿ ಕಲಿಕೆಯಲ್ಲಿ ಗಟ್ಟಿತನ ಬೆಳೆಸಲು ಸಮಾಜದ ಮುಂಚೂಣಿಗೆ ಬರುವಂತಾಗಬೇಕು ಎಂಬ ಉದ್ದೇಶದಿಂದ ಸಾಕ್ಷರತಾ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಶೇ. 30 ರಿಂದ 40ರಷ್ಟಿದ್ದ ಸಾಕ್ಷರತೆ ಪ್ರಮಾಣ ಇಂದು ಶೇ. 80ಕ್ಕೆ ತಲುಪಿದೆ ಎಂದರು.
ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕಾಶಿನಾಥ್, ಜಿಲ್ಲಾ ಕಾರಾಗೃಹದ ಅಧೀಕ್ಷಕ ಎನ್.ಎಸ್. ಶಿವಕುಮಾರ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಿ.ಎ.ಲೋಕೇಶ್, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಎನ್.ವಿ.ಸ್ವಾಮಿ, ಸಾಕ್ಷರತಾ ಸಹಾಯಕಿ ಶೋಭಾ, ಸಮನ್ವಯ ಶಿಕ್ಷಣ ಸಂಯೋಜಕ ಜೆ.ರೆಬೆಲ್ಲೊ ಉಪಸ್ಥಿತರಿದ್ದರು.