

ಚಾಮರಾಜನಗರ: ಜಿಲ್ಲೆಯ ವಿವಿಧ ಸರ್ಕಾರಿ ಶಾಲಾ ಕಾಲೇಜುಗಳಿಗೆ ಡಿಜಿಟಲ್ ಕಲಿಕೆ, ಕಂಪ್ಯೂಟರ್ ಶಿಕ್ಷಣ ಸೇರಿದಂತೆ ಇತರೆ ತಾಂತ್ರಿಕ ಸೌಲಭ್ಯಗಳನ್ನು ಇನ್‌ಫೋಸಿಸ್, ಮೈಸೂರಿನ ರೋಟರಿ ಪಂಚಶೀಲ ಸಂಸ್ಥೆ ಒದಗಿಸಲು ಮುಂದೆ ಬಂದಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳು, ಕಾಲೇಜುಗಳ ಸಮಗ್ರ ಮಾಹಿತಿ ಹಾಗೂ ಲಭ್ಯವಿರುವ ಶೈಕ್ಷಣಿಕ ಸೌಲಭ್ಯಗಳ ಕುರಿತು ವಿವರಿಸಲಾಯಿತು. ಇನ್‌ಫೋಸಿಸ್ ಸಂಸ್ಥೆಯು ಶಾಲಾ ಕಾಲೇಜು ಹಾಗೂ ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸ್ಪ್ರಿಂಗ್ ಬೋರ್ಡ್‌ನಲ್ಲಿ ರಾಜ್ಯ ಪಠ್ಯಕ್ರಮ, ಐಸಿಎಸ್‌ಸಿ, ಸಿಬಿಎಸ್‌ಸಿ, ಕೆರಿಯರ್ ಗೈಡೆನ್ಸ್ ಹಾಗೂ ಇನ್ನಿತರ ಹಲವಾರು ಅಂಶಗಳ ಬಗ್ಗೆ ಕಲಿಯಲು ಅವಕಾಶವಿರುವ ಕಾರ್ಯಕ್ರಮವನ್ನು ಮಾಡಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಿದೆ. ಜಿಲ್ಲೆಯಲ್ಲಿರುವ 50 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಕಂಪ್ಯೂಟರ್ ಶಿಕ್ಷಣ ನೀಡಲಾಗುವುದು. ಸೈಬರ್ ಸೆಕ್ಯುರಿಟಿ ಕೋರ್ಸ್ ಬಗ್ಗೆ ತಿಳಿಸಿಕೊಡಲಾಗುವುದು ಎಂದು ಇನ್‌ಫೋಸಿಸ್ ಸಂಸ್ಥೆಯ ಬಿಳಿಗಿರಿರಂಗ ತಿಳಿಸಿದರು.
ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್‌ಮಾತನಾಡಿ, ಆಯ್ದ ಶಾಲಾ ಕಾಲೇಜುಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಇನ್‌ಫೋಸಿಸ್ ಸಂಸ್ಥೆಯವರೊಂದಿಗೆ ತಕ್ಷಣವೇ ಭೇಟಿ ನೀಡಿ ಶಿಕ್ಷಕರು, ಬೋಧಕರೊಂದಿಗೆ ಚರ್ಚಿಸಿ ಶಾಲಾ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಅನುಷ್ಠಾನ ಸಂಬಂಧ ಕ್ರಮವಹಿಸಬೇಕು ಎಂದು ಸೂಚಿಸಿದರು.
ಪ್ರತಿ ಬ್ಲಾಕ್ ನಿಂದ 10 ಶಾಲೆಗಳನ್ನು ಹಾಗೂ ಪ್ರತಿ ಶಾಲೆಯಿಂದ ಇಬ್ಬರು ಶಿಕ್ಷಕರನ್ನು ಕಂಪ್ಯೂಟರ್ ಶಿಕ್ಷಣಕ್ಕೆ ಪಟ್ಟಿ ಮಾಡಿಕೊಳ್ಳಬೇಕು. ಗ್ರಾಮೀಣ, ಬಡ ಮಕ್ಕಳು ಹೆಚ್ಚು ಸಂಖ್ಯೆಯಲ್ಲಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪರಿಶಿಷ್ಟ ವರ್ಗದ ವಸತಿ ಶಾಲೆಗಳು, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ತಾಂತ್ರಿಕ ಕಾಲೇಜುಗಳು, ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಬೇಕು ಎಂದರು.
ರೋಟರಿ ಪಂಚಶೀಲ ಸಂಸ್ಥೆಯ ಕಿರಣ್‌ರಾಬರ್ಟ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸರಸ್ವತಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಪ್ರಸನ್ನ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.