

ಚಾಮರಾಜನಗರ: ನಗರದ ಗುಂಡ್ಲುಪೇಟೆ ರಸ್ತೆಯ ಹುದಾ ಪಬ್ಲಿಕ್ ಶಾಲೆಯ ಬಳಿ ಆ.30 ರ ರಾತ್ರಿ ನಡೆದಿದ್ದ ಅಪಘಾತ ಪ್ರಕರಣವನ್ನು ರಾಮಸಮುದ್ರ ಪೋಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಕಾಂತ್ ನೇತೃತ್ವದ ತಂಡ ತನಿಖೆ ಕೈಗೊಂಡಿದೆ.
ತಾಲೂಕಿನ ದಡದಹಳ್ಳಿ ಗ್ರಾಮದ ನಿವಾಸಿ ರಮೇಶ್(44)ಎಂಬುವವರು ರಾತ್ರಿ 7.30 ರ ಸಮಯದಲ್ಲಿ ಹುದಾ ಪಬ್ಲಿಕ್ ಸ್ಕೂಲ್ ಕಾಂಪೌಂಡ್ ಬಳಿ ಮರ್ಮಾಂಗಕ್ಕೆ ತೀವ್ರವಾಗಿ ಗಾಯವಾಗಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರು. ತೀವ್ರ ರಕ್ತಸ್ರಾವಾಗಿದ್ದ ಅವರನ್ನು ಯಡಬೆಟ್ಟದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆದಲ್ಲಿ ರಮೇಶ್ ಮೃತಪಟ್ಟಿದ್ದರು.
ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಅಪಘಾತ ಪ್ರಕರಣ ದಾಖಲಾಗಿತ್ತು. ರಮೇಶ್ ಪತ್ನಿ ಪ್ರತಿಮಾ ನೀಡಿರುವ ದೂರಿನ ಅನ್ವಯ ಪೊಲೀಸರು ಎ್ಐಆರ್ ದಾಖಲಿಸಿದ್ದರು. ಆದರೆ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ರಮೇಶ್ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಇದು ಅಪಘಾತವಲ್ಲ, ಕೊಲೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಈ ಅಪಘಾತ ಪ್ರಕರಣದಲ್ಲಿ ಇದ್ದ ಪೊಲೀಸ್ ಅಧಿಕಾರಿಯನ್ನು ಬದಲಾಯಿಸಿ ರಾಮ ಸಮುದ್ರ ಪೂರ್ವ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶ್ರೀಕಾಂತ್ ನೇತೃತ್ವದ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ವಿಜಯವಾಣಿಗೆ ಮಾಹಿತಿ ನೀಡಿದರು.
ಅನುಮಾನಕ್ಕೆ ಕಾರಣವಾಗಿದ್ದ ಅಪಘಾತ:
ತಾಲೂಕಿನ ದಡದಹಳ್ಳಿ ಗ್ರಾಮದ ರಮೇಶ್ ಎಂಬುವವರು ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಪ್ರತಿಮಾ ಗ್ರಾ.ಪಂ ಸದಸ್ಯಯಾಗಿದ್ದರು. ಆ.30 ರ ರಾತ್ರಿ ಹುದಾ ಪಬ್ಲಿಕ್ ಸ್ಕೂಲ್ ಕಾಂಪೌಂಡ್ ಸಮೀಪವೇ ಇರುವ ಸಲೀಂ ಗ್ಯಾರೇಜ್ ರಸ್ತೆಯಲ್ಲಿ ರಮೇಶ್ ತೀವ್ರ ರಕ್ತಸ್ರಾವದಿಂದ ನರಳುತ್ತಾ ಬಿದ್ದಿದ್ದರು. ಈ ವೇಳೆ ವೇಗವಾಗಿ ಲಾರಿಯೊಂದು ಬಂದು ಡಿಕ್ಕಿ ಹೊಡೆದಿದೆ ಎಂಬುದಾಗಿ ಹೇಳಲಾಗಿತ್ತು. ಆದರೆ ಲಾರಿ ಅಪಘಾತವಾಗಿದ್ದರೆ ದೇಹಕ್ಕೆ ಪೂರ್ತಿ ಪೆಟ್ಟಾಗ ಬೇಕಿತ್ತು. ಆದರೆ ಮರ್ಮಾಂಗದ ಭಾಗ ಬಿಟ್ಟು ಬೇರೆಲ್ಲೂ ಗಾಯವಾಗದೇ ಇರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿತ್ತು. ಬಹಿರಂಗವಾಗಿ ಹೇಳದೇ ಇದ್ದರೂ ಸಹ, ಸಾಕಷ್ಟು ಮುಖಂಡರು ಈ ಪ್ರಕರಣದಲ್ಲಿ ಕಟ್ಟುನಿಟ್ಟಿನ ತನಿಖೆ ನಡೆಸಬೇಕಿತ್ತು ಎಂಬ ಮಾತುಗಳನ್ನಾಡಿದ್ದರು. ಈಗ ಇನ್ಸ್‌ಪೆಕ್ಟರ್ ಶ್ರೀಕಾಂತ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ.