ರೈತರಿಂದಲೇ ಮಾರುಕಟ್ಟೆ ನಿಯಂತ್ರಣವಾಗಲಿ

13raju4
Published on

ಚಾಮರಾಜನಗರ: ಮಾರುಕಟ್ಟೆ ನಿಯಂತ್ರಣ ರೈತ ಸಮುದಾಯದಿಂದಲೇ ಆಗಬೇಕಿತ್ತು. ಆಗ ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಜಿಲ್ಲಾಕಾರಿ ಡಿ.ಎಸ್.ರಮೇಶ್ ಹೇಳಿದರು.


ನಗರದ ನ್ಯಾಯಾಲಯ ರಸ್ತೆಯ ಹಾಪ್‌ಕಾಮ್ಸ್ ಹಿಂಭಾಗದ ‘ನಮ್ದು’ ಮಳಿಗೆ ಆವರಣದಲ್ಲಿ ರಾಜ್ಯ ರೈತ ಸಂಘದ ವತಿಯಿಂದ ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಜನ್ಮದಿನದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಸಾವಯವ ರೈತ ಸಂತೆ ಉದ್ಘಾಟನೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ‘ನಮ್ದು’ ಪರಿಕಲ್ಪನೆ ಕಾರ್ಯ ರೂಪಕ್ಕೆ ಬರಲು ತಡವಾಗಿದೆ. ಅವರ ಚಿಂತನೆಯಂತೆಯೇ ನಮ್ದು ಮಳಿಗೆ ಈಗಾಗಲೇ ಹೆಮ್ಮರವಾಗಿ ಬೆಳೆಯಬೇಕಿತ್ತು. ಮುಂದಿನ ದಿನಗಳಲ್ಲಿ ಮಳಿಗೆ ಅಭಿವೃದ್ಧಿಗೊಳ್ಳಲಿ. ಮಾರುಕಟ್ಟೆಯಲ್ಲಿ ರೈತರು ಸ್ವಾಮ್ಯ ಸ್ಥಾಪಿಸುವಂತಾಗಲಿ ಎಂದರು.


ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ನ್ಯಾಯಾೀಶ ಶ್ರೀನಿ ಮಾತನಾಡಿ, ಸಾವಯವ ಕೃಷಿಗೆ ಹೆಚ್ಚಿನ ಗಮನ ನೀಡಬೇಕು. ಈ ವ್ಯವಸಾಯ ಮಾಡಲು ತಾಳ್ಮೆ ಇರಬೇಕು. ರೈತರ ಪದಾರ್ಥಗಳಿಗೆ ರೈತರೇ ದರ ನಿಗದಿ ಪಡಿಸಿಕೊಳ್ಳಬಹುದು ಎಂದರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ನಮ್ದು ಮಳಿಗೆಯಲ್ಲಿ ವಿಷಮುಕ್ತ ಆಹಾರ ಸಿಗಲಿದ್ದು, ರಾಸಾಯನಿಕ ಆಹಾರ ಸೇವನೆ ನಿಲ್ಲಿಸಬಹುದಾಗಿದೆ. ಈಗಾಗಲೇ ಸಾವಯವ ಸಂತೆಗಳನ್ನು ತಾಲೂಕು ಕೇಂದ್ರಗಳಲ್ಲಿ ಪ್ರಾರಂಭ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಕೇಂದ್ರಗಳಲ್ಲೂ ಸ್ಥಾಪನೆ ಮಾಡಲಾಗುವುದು ಎಂದರು.

ಸಾವಯವ ಸಂತೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಸಾವಯವ ಕೃಷಿಯಲ್ಲಿ ಬೆಳೆಯಲಾದ ಆಹಾರ ಪದಾರ್ಥ, ಸೊಪ್ಪು, ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಯಿತು. ಕೃಷಿಕ ಸಮಾಜದ ಅಧ್ಯಕ್ಷ ಚಿಕ್ಕಸ್ವಾಮಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್, ಸಾವಯವ ಕೃಷಿ ತಜ್ಞ ಸುರೇಶ್ ಪಿ.ದೇಸಾಯಿ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net