ಜೋಡೋ ಯಾತ್ರೆಯ ಪರಿಣಾಮ ಕಾಂಗ್ರೆಸ್ ಅಧಿಕಾರಕ್ಕೆ

07chn13
Published on

ಚಾಮರಾಜನಗರ: ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿಯ ಕನಸಿನ ಕೂಸು ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಕಾಂಗ್ರೆಸ್ ಜೋಡೋ ಯಾತ್ರೆಯ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ದೇಶದಲ್ಲಿ ಹೊಸ ಇತಿಹಾಸವನ್ನು ನಿರ್ಮಾಣಮಾಡಿದ ಭಾರತ್ ಜೋಡೋ ಪಾದಯಾತ್ರೆಯನ್ನು ಸಾಂಕೇತಿಕವಾಗಿ 1 ಗಂಟೆಗಳ ಕಾಲ ಪಾದಯಾತ್ರೆ ಮಾಡುವ ಮೂಲಕ ಸ್ಮರಣೆ ಮಾಡಿದ್ದೇವೆ. ಈ ಪಾದಯಾತ್ರೆ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಕನಸಿನ ಕೂಸಾಗಿತ್ತು. ಈ ಪಾದಯಾತ್ರೆಯ ಮೂಲಕ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆದು ಎಲ್ಲೆಡೆ ಪ್ರೀತಿ ಹಂಚಿದ್ದಾರೆ.
ರಾಜ್ಯದಲ್ಲಿ ಪಾದಯಾತ್ರೆ ಮಾಡಿದ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದೇ ಇದಕ್ಕೆ ನಿದರ್ಶನವಾಗಿದೆ. ಕನ್ಯಾಕುಮಾರಿಯಿಂದ, ಕಾಶ್ಮೀರದವರೆಗೆ ನಡೆದ ಈ ಪಾದಯಾತ್ರೆ ಭಾರತದ ರಾಜಕೀಯ ಚರಿತ್ರೆಯನ್ನೇ ಬದಲಾಯಿಸಿತು ಎಂದರು.

ರಾಜ್ಯ ಸರ್ಕಾರ ಜಾರಿ ಮಾಡಿರುವ ಮಹತ್ವಾಕಾಂಕ್ಷಿ 5 ಗ್ಯಾರೆಂಟಿ ಯೋಜನೆಗಳು, ಭಾರತ್ ಜೋಡೋ ಯಾತ್ರೆಯ ಪ್ರತಿಲವಾಗಿದೆ. ಪಾದಯಾತ್ರೆಯ ಸಂದರ್ಭದಲ್ಲಿ ರಾಹುಲ್‌ಗಾಂಧಿಗೆ ಎದುರಾದ ಶ್ರೀಸಾಮಾನ್ಯರ ಸಂಕಷ್ಟಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ದೇಶದಲ್ಲಿ ಕರ್ನಾಟಕ ಮಾಡೆಲ್ ಎಂದು ಕರೆಯಲಾಗುತ್ತಿದೆ. ನುಡಿದಂತೆ ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದೆಲ್ಲವೂ ಸಾಧ್ಯವಾಗಿದೆ. ಈ ನಿಟ್ಟನಲ್ಲಿ 2024 ರ ಲೋಕಸಭಾ ಚುನಾವಣೆ ನಮ್ಮ ಗುರಿಯಾಗಬೇಕು ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಬಿಜೆಪಿಯವರು ಜಾತಿಯನ್ನು ಎತ್ತಿಕಟ್ಟಿ, ಕೋಮುದ್ವೇಷವನ್ನು ಹಬ್ಬಿಸಿ ದೇಶವನ್ನೇ ಬೇಯಿಸುತ್ತಿದ್ದರು. ಆ ಸಂದರ್ಭದಲ್ಲಿ ಶಾಂತಿ,ನೆಮ್ಮದಿ ಕಾಪಾಡುವ ಉದ್ದೇಶದಿಂದ ಪ್ರಾರಂಭವಾದ ಭಾರತ್‌ಜೋಡೋ ಯಾತ್ರೆ ಹೊಡೆದ ಮನಸ್ಸುಗಳನ್ನು ಒಂದುಗೂಡಿಸಿತು. ಪಾದಯಾತ್ರೆಗೆ ರಾಜ್ಯದಲ್ಲೂ ಅಭೂತಪೂರ್ವ ಸ್ವಾಗತವನ್ನು ಕೋರಲಾಗಿತ್ತು. ಪಾದಯಾತ್ರೆಯ ಪರಿಣಾಮ ರಾಜ್ಯದಲ್ಲಿ ಅಭೂತಪೂರ್ವ ಯಶಸ್ಸು ದೊರೆಯಿತು ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಮಹದೇವ್, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಅಸ್ಗರ್ ಮುನ್ನಾ, ಗುರುಸ್ವಾಮಿ, ಚಂದ್ರು, ತೊಂಟೇಶ್, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಉಮೇಶ್ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net