

ಚಾಮರಾಜನಗರ: ವಿಧಾನಸಭೆ ಚುನಾವಣೆಯಷ್ಟೇ ಕಾವೇರಲಿರುವ ಜಿಲ್ಲಾ ಪಂಚಾಯಿತಿ ಎಲೆಕ್ಷನ್‌ಗೆ ವೇದಿಕೆ ಸಿದ್ಧಗೊಳ್ಳುತ್ತಿದ್ದು, ರಾಜ್ಯಸರ್ಕಾರ ಸದಸ್ಯರ ಸಂಖ್ಯೆ, ಗಡಿ ನಿರ್ಣಯ ಮಾಡಿದೆ.
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಸೆ.5ರಂದು ರಾಜ್ಯ ಪತ್ರ ಹೊರಡಿಸಿದೆ. ಇದರಂತೆ ಚಾಮರಾಜನಗರ ಜಿಲ್ಲೆಯಲ್ಲಿ ಚಾಮರಾಜನಗರದಲ್ಲಿ 9 ಸದಸ್ಯರು, ಹನೂರು ಮತ್ತು ಗುಂಡ್ಲುಪೇಟೆಯಲ್ಲಿ ತಲಾ 6 ಸದಸ್ಯರು, ಕೊಳ್ಳೇಗಾಲದಲ್ಲಿ 4 ಸದಸ್ಯರು, ಯಳಂದೂರಿನಲ್ಲಿ 3 ಸದಸ್ಯರ ಸಂಖ್ಯೆಯನ್ನು ನಿಗದಿ ಪಡಿಸಿದೆ.
ಚಾಮರಾಜನಗರ ತಾಲೂಕಿನಲ್ಲಿ ಸಂತೇಮರಹಳ್ಳಿ, ಮಾದಾಪುರ, ಆಲೂರು, ಚಂದಕವಾಡಿ, ಹರದನಹಳ್ಳಿ, ಅಮಚವಾಡಿ, ಉಡಿಗಾಲ, ಹರವೆ, ಹೊಂಗನೂರು ಕ್ಷೇತ್ರಗಳಿವೆ. ಗುಂಡ್ಲಪೇಟೆ ತಾಲೂಕಿನಲ್ಲಿ ಬೇಗೂರು, ಬರಗಿ, ಕಬ್ಬಹಳ್ಳಿ, ತೆರಕಣಾಂಬಿ, ಹಂಗಳ, ಬನ್ನೀತಾಳಪುರ, ಕೊಳ್ಳೇಗಾಲ ತಾಲೂಕಿನಲ್ಲಿ ಕುಂತೂರು, ಸತ್ತೇಗಾಲ, ಪಾಳ್ಯ, ಕೊಂಗರಹಳ್ಳಿ, ಹನೂರು ತಾಲೂಕಿನಲ್ಲಿ ಲೊಕ್ಕನಹಳ್ಳಿ, ಬಂಡಳ್ಳಿ, ಕೌದಳ್ಳಿ, ರಾಮಾಪುರ, ಮಾರ್ಟಳ್ಳಿ, ಮಲೈಮಹದೇಶ್ವರ ಬೆಟ್ಟ, ಯಳಂದೂರು ತಾಲೂಕಿನಲ್ಲಿ ಅಗರ, ಯಳಂದೂರು ಕಸಬಾ, ಕೆಸ್ತೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳನ್ನು ನಮೂದಿಸಲಾಗಿದೆ. ಸೆ.15ರೊಳಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.