ರಕ್ತಚಂದನ ಸಾಗಿಸುತ್ತಿದ್ದ ನಾಲ್ವರ ಬಂಧನ

774ad61b-00a3-47d4-990a-2d632eb01810
Published on

ಗುಂಡ್ಲುಪೇಟೆ: ತರಕಾರಿ ವಾಹನದಲ್ಲಿ ರಕ್ತಚಂದನ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಸಿಬ್ಬಂದಿ ದಾಳಿ ನಡೆಸಿ ಮಾಲು ಸಮೇತ ಬಂಧಿಸಿದ್ದಾರೆ.

ಮಂಗಳವಾರ ಸಂಜೆ ಮೂರು ತಂಡಗಳಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಲಕ್ಕೂರು ಗೇಟ್ ಸಮೀಪ ತರಕಾರಿ ತುಂಬಿದ್ದ ಪಿಕಪ್ ವಾಹನದಲ್ಲಿ ಹೂಕೋಸಿನ ಕೆಳಗೆ ಇದ್ದ 50 ಕೆಜಿ ತೂಕದ ಎರಡು ರಕ್ತಚಂದನದ ತುಂಡುಗಳನ್ನು ವಶಕ್ಕೆ ಪಡೆದರು. ಬೆಂಗಳೂರಿನ ಅಮೃತಹಳ್ಳಿಯ ಆರ್.ಎಲ್.ರವಿ(47), ಚಾಮರಾಜನಗರ ಸರಗೂರು ಮೋಳೆಯ ಎಸ್.ಎಂ.ಗೋವಿಂದರಾಜು(43), ಭ್ರಮರಾಂಬ ಬಡಾವಣೆಯ ಸಿ.ಎಸ್.ಅಸ್ಗರ್ ಪಾಷಾ(63), ಚಂದಕವಾಡಿಯ ಮಹೇಂದ್ರ(32) ಬಂಧಿತರು. ಕೃತ್ಯಕ್ಕೆ ಬಳಸಲಾದ ಬೊಲೆರೊ ಪಿಕಪ್ ವಾಹನ ಹಾಗೂ ಎರಡು ಬೈಕುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹುಲಿ ಯೋಜನೆಯ ನಿರ್ದೇಶಕ ಡಾ.ರಮೇಶ್‌ಕುಮಾರ್ ಮಾರ್ಗದರ್ಶನದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಸಿಎಫ್‌ಗಳಾದ ರವೀಂದ್ರ, ಕೆ.ಪರಮೇಶ್, ಬಫರ್ ವಲಯದ ಆರ್‌ಎಫ್‌ಒ ಎನ್.ಪಿ.ನವೀನ್‌ಕುಮಾರ್, ಡಿಆರ್‌ಎಫ್‌ಒಗಳು ಮತ್ತು ಎಸ್‌ಟಿಪಿಎಫ್ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net