

ಚಾಮರಾಜನಗರ: ಕಾವೇರಿ ವಿವಾದ ಮತ್ತು ರೈತರ ಆತ್ಮಹತ್ಯೆ ವಿಚಾರದಲ್ಲಿ ಹೇಳಿಕೆ ನೀಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ವಿರುದ್ಧ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ನಗರದಲ್ಲಿ ಬುಧವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಮುಖ್ಯ ದ್ವಾರದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ತಮಿಳುನಾಡು, ಕರ್ನಾಟಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸಕ್ಕರೆ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ರೈತರ ಆತ್ಮಹತ್ಯೆಯ ಕುರಿತು ನೀಡಿರುವ ಹೇಳಿಕೆ ಅವಿವೇಕಿತನದಿಂದ ಕೂಡಿದೆ. 5 ಲಕ್ಷ ರೂ.ಗೋಸ್ಕರ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ರಾಜ್ಯದ ಕಬ್ಬು ಬೆಳೆಗಾರರಿಗೆ ಬರಬೇಕಾದ 950 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ಯೋಗ್ಯತೆ ಇಲ್ಲ. ಇಂತಹವರು ರೈತರ ಬಗ್ಗೆ ಮಾತನಾಡುತ್ತಾರೆ. ಎಲ್ಲ ರೈತರೂ ಸೇರಿ ಸಚಿವರಿಗೆ 50 ಕೋಟಿ ರೂ. ಕೊಡುತ್ತೇವೆ. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಹೇಳಿ ನೋಡೋಣ. ರೈತರ ಆತ್ಮಹತ್ಯೆ ಬಗ್ಗೆ ಹೇಳಿಕೆ ನೀಡಿರುವ ಸಚಿವ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದರೆ ಸಚಿವರ ವಿರುದ್ಧ ಅಭಿಯಾನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರಿಗೆ ನ್ಯಾಯಾಲಯದ ಮೇಲೆ ವಿಶೇಷ ಗೌರವವಿದೆ. ಆದರೆ, ಕೃಷಿಗೆ, ಕುಡಿಯಲು ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಜನರ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಕಾವೇರಿ ವಿವಾದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಬೇಗ ತೀರ್ಪು ಕೊಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೋರ್ಟ್ ತೀರ್ಪು ಬರುವವರೆಗೂ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಬಿಡಬಾರದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಭಾಷಣ ಮಾಡುತ್ತಾರೆ, ಹಲವಾರು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ಕಾವೇರಿ ನೀರಿನ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಮಾತ್ರ ಆಗುತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದರೆ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯನ್ನು ಬಳಸಿಕೊಂಡು ಉಚಿತ ಬಸ್ ಪ್ರಯಾಣ ಮಾಡಿ ತಮಿಳುನಾಡಿಗೆ ಹೋಗಿ ನೀರು ತರಬೇಕಾಗಿದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ರಾಜಕೀಯ ಮಾಡುವುದನ್ನು ಬಿಟ್ಟು ನೀರಿನ ವಿವಾದವನ್ನು ಬಗೆಹರಿಸಲಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಾಲಿನ ನಾಗರಾಜು, ಹರ್ಷ, ಸಿದ್ದಲಿಂಗಪ್ಪ, ಕುಮಾರ್, ಮಹೇಶ್, ಮಹದೇವಸ್ವಾಮಿ, ವೀರಭದ್ರಸ್ವಾಮಿ, ಕೀಳಲಿಪುರ ನಂದೀಶ್, ಮಹದೇವಪ್ಪ ಶ್ರೀಕಂಠಪ್ಪ ಮತ್ತು ಇತರರು ಭಾಗವಹಿಸಿದ್ದರು.