ಜಿಲ್ಲೆಗೆ ಸಿಗುವುದೇ ಸಚಿವ ಸ್ಥಾನ?

c.puttaranga shetty
Published on

ಚಾಮರಾಜನಗರ: ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಕೈ ಭದ್ರಕೋಟೆಯಾಗಿ ಹೊರಹೊಮ್ಮಿದ್ದು, ರಾಜಕೀಯ ಪ್ರಾತಿನಿಧ್ಯ ನೀಡುವ ಸಲುವಾಗಿ ಸರ್ಕಾರದಲ್ಲಿ ಇಲ್ಲಿನ ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುಲಿದೆ ಎನ್ನುವ ಕುತೂಹಲ ಕಾಡುತ್ತಿದೆ.

ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿಷ್ಯ, ನಾಲ್ಕು ಬಾರಿ ಗೆದ್ದಿರುವ ಸಿ.ಪುಟ್ಟರಂಗಶೆಟ್ಟಿ ಹೆಸರು ಜಿಲ್ಲಾ ಮಟ್ಟದಲ್ಲಿ ಸಚಿವಗಿರಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿಗೂ ಅವಕಾಶ ಸಿಗಬಹುದೆಂದು ಹೇಳಲಾಗುತ್ತಿದೆ. ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್‌ಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿದ್ದು, ಶನಿವಾರ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಯಾರಿಗೆ ಮಂತ್ರಿ ಭಾಗ್ಯ ಲಭಿಸುತ್ತದೆ ಎನ್ನುವುದು ಗೊತ್ತಾಗುತ್ತದೆ.

ಶಾಸಕರು ಹೇಳುವುದೇನು? ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ.
ಕಳೆದ ಸಲ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಿ.ಪುಟ್ಟರಂಗಶೆಟ್ಟಿ ಸಚಿವರಾಗಿದ್ದರು. ಜಿಲ್ಲಾ ಉಸ್ತುವಾರಿ ಜವಾಬ್ದಾರಿಯೂ ಸಿಕ್ಕಿತ್ತು. ಈ ಸಲವೂ ಸಚಿವ ಸ್ಥಾನ ಸಿಗುವ ಶೇ.100ರಷ್ಟು ಭರವಸೆ ಇದೆ ಎಂದು ಹೇಳಿದ್ದಾರೆ. ರಾಜ್ಯದ ಏಕೈಕ ಉಪ್ಪಾರ ಸಮಾಜದ ಶಾಸಕರಾಗಿರುವ, ಸತತ ನಾಲ್ಕನೇ ಸಲ ಗೆದ್ದಿರುವ ಮತ್ತು ಹಿರಿಯ ರಾಜಕಾರಣಿ ವಿ.ಸೋಮಣ್ಣ ಅವರ ವಿರುದ್ಧ ಗೆಲುವು ಸಾಧಿಸಿರುವ ಪ್ರಭಾವಿ ನಾಯಕರಾಗಿ ಸಿ.ಪುಟ್ಟರಂಗಶೆಟ್ಟಿ ಈ ಚುನಾವಣೆಯಲ್ಲಿ ಹೊರಹೊಮ್ಮಿದ್ದಾರೆ. ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಅನುಷ್ಠಾನ ಮಾಡಲು ಸೂಕ್ಷ್ಮಾತಿಸೂಕ್ಷ್ಮ ಸಮಾಜಗಳಲ್ಲಿ ಒಂದಾಗಿರುವ ಉಪ್ಪಾರ ಸಮಾಜದ ನಾಯಕನಿಗೆ ಸಚಿವ ಸ್ಥಾನ ಸಿಗಬಹುದೆಂದು ಕ್ಷೇತ್ರದ ಮತದಾರರು ಅಂದಾಜಿಸಿದ್ದಾರೆ.

ಇನ್ನು ಕೇವಲ 1 ಮತದ ಅಂತರದ ಸೋಲಿನ ಬಳಿಕ ಸತತ 6 ಚುನಾವಣೆಗಳಲ್ಲಿ ಸೋಲು ಕಂಡು ಇದೀಗ ಅತ್ಯಧಿಕ ಮತಗಳ ಅಂತರದ ಗೆಲುವು ದಾಖಲಿಸಿರುವ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಎಆರ್‌ಕೆ, ಸಚಿವ ಸ್ಥಾನ ಹಂಚಿಕೆ ವಿಷಯ ವರಿಷ್ಠರಿಗೆ ಬಿಟ್ಟದ್ದು. ಪರಿಶಿಷ್ಟ ಜಾತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾಗಿದ್ದಾರೆ. ಡಾ.ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ ಮತ್ತಿತರರು ಇದ್ದಾರೆ. ನನಗೆ ಸಚಿವ ಸ್ಥಾನ ಸಿಕ್ಕರೂ ಸಿಗಬಹುದು. ಪ್ರಯತ್ನ ನಮ್ಮದು, ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಮಾತನಾಡಿ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಪ್ರಾತಿನಿಧ್ಯ ನಿರೀಕ್ಷೆ: ಈ ಸರ್ಕಾರದಲ್ಲಿ ಜಿಲ್ಲೆಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂಬ ಒತ್ತಾಯ ಜೋರಾಗಿದೆ. ಸಿದ್ದರಾಮಯ್ಯ ಆಪ್ತರಾಗಿರುವ ಸಿ.ಪುಟ್ಟರಂಗಶೆಟ್ಟಿ ಮತ್ತು ಮಾಜಿ ರಾಜ್ಯಪಾಲ ಬಿ.ರಾಚಯ್ಯ ಪುತ್ರ ಎ.ಆರ್.ಕೃಷ್ಣಮೂರ್ತಿ, ಎಚ್.ಎಸ್.ಮಹದೇವಪ್ರಸಾದ್ ಪುತ್ರ ಎಚ್.ಎಂ.ಗಣೇಶ್‌ಪ್ರಸಾದ್‌ಗೆ ಅವರವರ ಬೆಂಬಲಿಗರು ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕರೆ ಅಭಿವೃದ್ಧಿಗೂ ಪೂರಕವಾಗಲಿದೆ. ಮುಂದಿನ ಲೋಕಸಭೆ ಚುನಾವಣೆಗೆ ಸಹಕಾರಿಯಾಗಲಿದೆ ಎಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net