

ಯಳಂದೂರು: ಸರಿಯಾಗಿ ಕರ್ತವ್ಯ ನಿರ್ವಹಿಸದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿರುದ್ಧ ಪಪಂ ಸದಸ್ಯರು ಇತ್ತೀಚೆಗೆ ದೂರು ಸಲ್ಲಿಸಿದರು.
ಕಳೆದ ಮಾರ್ಚ್‌ನಲ್ಲಿ ಚುನಾವಣೆ ನಿಮಿತ್ತ ಇಲ್ಲಿಗೆ ರವಿಕೀರ್ತಿ ಎಂಬುವರನ್ನು ಮುಖ್ಯಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೆ ಅವರು ಪಂಚಾಯಿತಿ ಅಭಿವೃದ್ಧಿಗೆ ಪೂರಕವಾದ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಅಲ್ಲದೆ ಕಚೇರಿಗೆ ಅವರು ಹೆಚ್ಚು ಗೈರಾಗುತ್ತಾರೆ. ಶಾಸಕರು ಇಲ್ಲವೆ ಇನ್ನಿತರ ಅಧಿಕಾರಿಗಳು ಭೇಟಿ ನೀಡಿದಾಗ ಮಾತ್ರ ಅವರು ಕಚೇರಿಯಲ್ಲಿರುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ನನಗೆ ಹುಷಾರಿಲ್ಲ, ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲ, ಇಲ್ಲವೆ ಜಿಲ್ಲೆಯಲ್ಲಿ ಸಭೆ ಇತ್ತು, ಬೇಕಾದರೆ ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ದೂರು ನೀಡಿ ಎಂಬ ಉತ್ತರ ನೀಡುತ್ತಾರೆ ಎಂದು ದೂರಿದರು.
ಅಲ್ಲದೆ ಕಚೇರಿಯಲ್ಲಿ ಇ-ಸ್ವತ್ತು, ಖಾತೆ ಸೇರಿದಂತೆ ಇತರ ಕಡತಗಳನ್ನು ವಿಲೇವಾರಿ ಮಾಡಲು ವಿಳಂಬ ಮಾಡಲಾಗುತ್ತಿದೆ. ಪಂಚಾಯಿತಿಯಲ್ಲಿದ್ದ ಆರೋಗ್ಯ ಅಧಿಕಾರಿಯೂ ವರ್ಗವಾಗಿದ್ದು ಪಟ್ಟಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಪಟ್ಟಣದ ಎಲ್ಲ ವಾರ್ಡ್‌ಗಳಲ್ಲೂ ಕಸ ವಿಲೇವಾರಿಯಾಗದೆ ಸಮಸ್ಯೆ ಉಲ್ಬಣಿಸಿದೆ. ವಿದ್ಯುತ್ ದೀಪಗಳನ್ನು ಬದಲಿಸಲು ಹೇಳಿ 2 ತಿಂಗಳಾದರೂ ಬದಲಿಸಿಲ್ಲ. ಹಾಗಾಗಿ ಕೆಲ ವಾರ್ಡ್‌ಗಳಲ್ಲಿ ಕಗ್ಗತ್ತಲು ಆವರಿಸಿದೆ. ಮೊನ್ನೆ ಸುರಿದ ಮಳೆಗೆ ಕುಂಬಾರಗುಂಡಿ ಸೇರಿದಂತೆ ಹಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ಬಸ್ ನಿಲ್ದಾಣದಲ್ಲೂ ನೀರು ಸರಿಯಾಗಿ ಹರಿಯದೆ ನಿಲ್ದಾಣವೆಲ್ಲ ಕೆರೆಯಂತಾಗಿತ್ತು. ಆದರೂ ಈ ಸಮಸ್ಯೆಗೆ ಪರಿಹಾರ ನೀಡಿಲ್ಲ.
ಹಲವು ವಾರ್ಡ್‌ಗಳಲ್ಲಿ ಕಸ ರಾಶಿ ಬಿದ್ದಿದ್ದು ರೋಗಜನ್ಯ ಪ್ರದೇಶವಾಗಿ ಮಾರ್ಪಟ್ಟಿದೆ. ಸಾರ್ವಜನಿಕರು ಚುನಾಯಿತ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು, ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಬಿ.ರವಿ, ಮಂಜು ಮತ್ತಿತರರಿದ್ದರು.