ತ್ರಿಮುಖ ಕಲ್ಯಾಣಿ ಗೋಮುಖೇಶ್ವರ

06chn3
Published on

ಚಾಮರಾಜನಗರ : ಕಷ್ಟಗಳನ್ನು ಹೇಳಿಕೊಂಡು ಯಾರೇ ಭಕ್ತರು ಬಂದರೂ ಪರಿಹಾರ ನೀಡುವ ಗೋಮುಖೇಶ್ವರ ಹಲವು ವಿಶೇಷಗಳನ್ನು ಒಡಲಿನಲ್ಲಿ ತುಂಬಿಕೊಂಡು ತ್ರಿಮುಖ ಕಲ್ಯಾಣಿಯಲ್ಲಿ ನೆಲೆಸಿದ್ದಾನೆ.

ತಾಲೂಕಿನ ಹರದನಹಳ್ಳಿ ಮತ್ತು ಬಂಡಿಗೆರೆ ಗ್ರಾಮದ ಮರಗದಕೆರೆ ಹರಿದುಹೋಗುವ ಸಮೀಪವೇ ಇರುವ ತ್ರಿಮುಖ ಕಲ್ಯಾಣಿ ಕೊಳದಲ್ಲಿ ಶ್ರೀಗೋಮುಖೇಶ್ವರ ಲಿಂಗವನ್ನು ಸಾವಿರಾರು ವರ್ಷಗಳ ಹಿಂದೆ ಪ್ರತಿಷ್ಠಾಪಿಸಲಾಗಿದೆ. ಕೊಳದ ನಡುವೆ ನಂದಿಯ ಮೂರ್ತಿ ಇದ್ದು, ಗೋಮುಖೇಶ್ವರ ಲಿಂಗದ ಮುಂಭಾಗವೇ ಆಳವಾದ ಬಾವಿ ಇದೆ. ದೇವಾಲಯದ ಸುತ್ತಲೂ ಬೇವು, ಬನ್ನಿಮರ, ತಾರೆಮರ, ಅರಳೀಮರ ಹಾಗೂ ಲಿಂಗದ ಮುಂದೆ ಎರಡು ತೆಂಗಿನ ಮರಗಳು ಇವೆ.

ಶ್ರೀ ಗೋಮುಖೇಶ್ವರ ದೇವಸ್ಥಾನದಲ್ಲಿ ಪ್ರತಿದಿನವೂ ಪೂಜೆ ನಡೆಯುತ್ತದೆ. ಶನಿವಾರ ಮತ್ತು ಸೋಮವಾರ ಹೆಚ್ಚಾಗಿ ಜನರು ಬಂದು ಪೂಜೆ ಸಲ್ಲಿಸುತ್ತಾರೆ. ಅಮಾವಾಸ್ಯೆ ಮತ್ತು ಪೂರ್ಣಿಮೆಯ ದಿನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಭೀಮನ ಅಮಾವಾಸ್ಯೆಯ ದಿನ ವಿಶೇಷವಾಗಿ ಜಾತ್ರೆಯೂ ನಡೆಯುತ್ತದೆ. ಬಂಡಿಗೆರೆ ಗ್ರಾಮದ ನಂಜುಂಡಶೆಟ್ಟಿ ಯಾವುದೇ ಫಲಾಪೇಕ್ಷೆ ಇಲ್ಲದೆ ದೇವಸ್ಥಾನದಲ್ಲಿ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಹರದನಹಳ್ಳಿ ಮತ್ತು ಬಂಡಿಗೆರೆ ಗ್ರಾಮಸ್ಥರು ಯಾವುದೇ ಪೂಜೆ ಅಥವಾ ಹಬ್ಬಗಳನ್ನು ಮಾಡಿದರೂ ಇಲ್ಲಿಂದಲೇ ಪ್ರಾರಂಭಿಸುವ ವಾಡಿಕೆ ಇದೆ. ಯಾರೇ ಭಕ್ತರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಬಂದರೆ ಪರಿಹಾರ ನೀಡುವ ಈ ದೇವಾಲಯಕ್ಕೆ ಬೆಂಗಳೂರು, ಮೈಸೂರು, ಸಾಲಿಗ್ರಾಮ, ಕೆ.ಆರ್.ನಗರ, ಮಂಡ್ಯ ಹಾಗೂ ಇನ್ನಿತರ ಹೊರ ಜಿಲ್ಲೆಗಳಿಂದಲೂ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ವಿಶೇಷವೆಂದರೆ ಯಾರೂ ಈ ದೇವಾಲಯದಲ್ಲಿ ಉಳಿಯುವುದಿಲ್ಲ, ಪೂಜೆ ಮಾಡಿಸಿಕೊಂಡ ನಂತರ ಹೊರಟು ಬಿಡುತ್ತಾರೆ. ಸ್ಥಳೀಯ ಜನರು ಗೋಮುಖೇಶ್ವರನ ಕುರಿತು ಹಲವು ಪುರಾಣ ಕತೆಗಳನ್ನು ಹೆಣೆದಿದ್ದು, ಐತಿಹಾಸಿಕವಾಗಿಯೂ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ನೂರು ಪುರಾಣದ ಕಥೆ
ಶ್ರೀಗೋಮುಖೇಶ್ವರ ದೇವಾಲಯ ಇರುವ ಸ್ಥಳದಲ್ಲಿ ಋಷಿಮುನಿಯೊಬ್ಬರು ತಪಸ್ಸು ಆಚರಿಸಿ, ಇಲ್ಲಿ ತ್ರಿಮುಖ ಕಲ್ಯಾಣಿ ಕೊಳ ನಿರ್ಮಿಸಿದರು ಎಂಬುದು ಸೇರಿದಂತೆ ಹಲವು ಪುರಾಣ ಕಥೆಗಳಿವೆ. ಮೂರು ಮುಖವನ್ನು ಹೊಂದಿರುವ ಕಲ್ಯಾಣಿಯಾದ್ದರಿಂದ ತ್ರಿಮುಖ ಎಂದು ಹೆಸರು ಬಂದಿದೆ. ಬಂಡಿಗೆರೆ ಗ್ರಾಮದ ಬೆಳಗಿರಿಶೆಟ್ಟಿ, ಸುಬ್ಬಶೆಟ್ಟಿ, ಪುಟ್ಟಣ್ಣಶೆಟ್ಟಿ ಮತ್ತು ವಸ್ತಿಗಿರಿಶೆಟ್ಟಿ ಅವರ ಕುಟುಂಬ ತಲೆತಲಾಂತರಗಳಿಂದ ದೇವಾಲಯದಲ್ಲಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಈಗ ವಸ್ತಿಗಿರಿಶೆಟ್ಟಿ ಅವರ ಮಗ ಅರ್ಚಕ ನಂಜುಂಡಶೆಟ್ಟಿ ದೇವರನ್ನು ಪೂಜಿಸಿ, ಭಕ್ತರಿಗೆ ಅನುಕೂಲ ಮಾಡುವುದರ ಜತೆಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ದೇವರ ಸೇವೆ ಮಾಡಿಕೊಂಡು ಬರುತ್ತಿದ್ದಾರೆ.

ಐತಿಹಾಸಿಕ ಹಿನ್ನೆಲೆ:
ಕ್ರಿ.ಶ.1511ರಲ್ಲಿ ಹೊಯ್ಸಳರ ದೊರೆ ಬಲ್ಲಾಳ-3 ದಿವ್ಯಲಿಂಗೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿದ ಸಂದರ್ಭದಲ್ಲಿ ಶ್ರೀಗೋಮುಖೇಶ್ವರ ಕಲ್ಯಾಣಿಯನ್ನು ನಿರ್ಮಿಸಿರಬಹುದು ಎಂದು ಹೇಳಲಾಗುತ್ತದೆ. ಮತ್ತೊಂದು ಕಡೆ ಉಮ್ಮತ್ತೂರಿನ ಪಾಳೆಗಾರರು ಆಳ್ವಿಕೆ ನಡೆಸುವ ಸಂದರ್ಭದಲ್ಲಿ ನಿರ್ಮಿಸಿರಬಹುದು ಎಂದು ಇತಿಹಾಸ ಸಾರುತ್ತದೆ. ಇದಕ್ಕೆ ಪುರಾವೆ ಎಂಬಂತೆ ಭೀಮನ ಅಮಾವಾಸ್ಯೆಯ ಸಂದರ್ಭದಲ್ಲಿ ದಿವ್ಯಲಿಂಗೇಶ್ವರ ದೇವಸ್ಥಾನದಿಂದ ಈಶ್ವರನ ಕಂಚಿನ ವಿಗ್ರಹ ತಂದು ಇಲ್ಲಿ ಹೋಮ, ಹವನ ಮಾಡಿಸಿ, ವಿಶೇಷ ಪೂಜೆ ಸಲ್ಲಿಸಿ ತದನಂತರ ದಿವ್ಯಲಿಂಗೇಶ್ವರ ದೇವಸ್ಥಾನಕ್ಕೆ ಹಿಂದಿರುಗಿಸುವ ವಾಡಿಕೆ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ದೇವಾಲಯದ ಸುತ್ತಲೂ ಇರುವ ಅನೇಕ ಕಲ್ಲಿನ ವಿಗ್ರಹಗಳು ಇದನ್ನು ಐತಿಹಾಸಿಕ ಸ್ಥಳ ಎಂಬುದನ್ನು ಸಾರಿ ಹೇಳುತ್ತವೆ.

ಭೀಮನ ಅಮಾವಾಸ್ಯೆ ವಿಶೇಷ
ಪ್ರತಿ ವರ್ಷವೂ ಭೀಮನ ಅಮಾವಾಸ್ಯೆಯ ದಿನ ಶ್ರೀ ಗೋಮುಖೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಬೆಳಗ್ಗೆ 7 ಗಂಟೆಯಿಂದ ಸಂಜೆಯವರೆಗೂ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ. ದೊಡ್ಡಮೋಳೆ, ಸೋಮವಾರಪೇಟೆ, ಚಿಕ್ಕಮೋಳೆ, ಬ್ಯಾಡಮೂಡ್ಲು, ತಾವರೆಕಟ್ಟೆ ಮೋಳೆ, ಬಂಡಿಗೆರೆ ಹಾಗೂ ಇನ್ನಿತರ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡಿ ಪೂಜೆಯಲ್ಲಿ ಭಾಗವಹಿಸುತ್ತಿದ್ದಾರೆ. ದೇವಸ್ಥಾನದ ಕಲ್ಯಾಣಿಯ ಸಮೀಪವೇ ದೊಡ್ಡದೊಂದು ಬಾವಿಯಲ್ಲಿರುವ ಸಿಹಿಯಾದ ನೀರು ಸೇವಿಸಿದರೆ ಅನೇಕ ರೋಗ ರುಜಿನಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯೂ ಹಿಂದಿನ ಜನರಲ್ಲಿ ಇತ್ತು ಎಂದು ಅರ್ಚಕ ನಂಜುಂಡಶೆಟ್ಟಿ ವಿಜಯವಾಣಿಗೆ ಮಾಹಿತಿ ನೀಡಿದರು.

ಅಭಿವೃದ್ಧಿಗೆ ಬೇಕು ನೆರವು
ಶ್ರೀ ಗೋಮುಖೇಶ್ವರ ದೇವಾಲಯ ಹಲವು ವೇಶಿಷ್ಟ್ಯಗಳಿಂದ ಕೂಡಿದ್ದರೂ, ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದರೂ ಈವರೆಗೂ ಅಭಿವೃದ್ಧಿ ಕಂಡಿಲ್ಲ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಲಾಗಿದೆ. ಮರಗದ ಕೆರೆ ಕೋಡಿ ಬಿದ್ದರೆ ಈ ದೇವಾಲಯ ಸಂಪೂರ್ಣವಾಗಿ ತುಂಬಿ ಹೋಗುತ್ತದೆ. ಹಾಗಾಗಿ ದೇವಾಲಯ ಹಾಗೂ ಕಲ್ಯಾಣಿಯನ್ನು ರಕ್ಷಣೆ ಮಾಡಬೇಕಿದೆ. ದೇವಾಲಯದ ಸಮೀಪ ಊಟದ ಮನೆ ಹಾಗೂ ಇನ್ನಿತರ ಮೂಲ ಸೌಕರ್ಯ ಕಲ್ಪಿಸುವ ಅಗತ್ಯವಿದೆ ಎಂದು ಬಂಡಿಗೆರೆ ಗ್ರಾಮದ ಗಡಿ ಯಜಮಾನ ಜಯಸ್ವಾಮಿ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net