ಜಿಲ್ಲಾಸ್ಪತ್ರೆಯ ಆವರಣದಲ್ಲಿ ವಾಹನ ನಿಲುಗಡೆಗೆ ನಿರ್ಬಂಧ

05chn8
Published on

ಚಾಮರಾಜನಗರ: ಜಿಲ್ಲಾಸ್ಪತ್ರೆಯ ಹೊರಾಂಗಣದಲ್ಲಿ ಎಲ್ಲಿ ನೋಡಿದರೆ ಅಲ್ಲಿ, ಇನ್ನು ಮುಂದೆ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವ ಆಗಿಲ್ಲ.

ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಗೆ ದಿನನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಈ ಆಸ್ಪತ್ರೆಯಲ್ಲೇ ಹೆರಿಗೆ ಆಸ್ಪತ್ರೆ ಇರುವುದರಿಂದ ರೋಗಿಗಳ ಜತೆಗೆ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ವೇಳೆ ಜಿಲ್ಲಾಸ್ಪತ್ರೆಯ ಹೊರಾಂಗಣದಲ್ಲಿ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದರಿಂದ ರೋಗಿಗಳಿಗೆ ಹಾಗೂ ತೀವ್ರನಿಗಾ ಘಟಕಕ್ಕೆ ಬರುವ ಆಂಬುಲೆನ್ಸ್ ವಾಹನಗಳಿಗೆ ನಿತ್ಯವೂ ಸಮಸ್ಯೆ ಉಂಟಾಗುತ್ತಿತ್ತು. ಈ ಸಮಸ್ಯೆಯನ್ನು ಮನಗಂಡಿರುವ ವೈದ್ಯಕೀಯ ಆಸ್ಪತ್ರೆಯ ನಿರ್ದೇಶಕ ಹಾಗೂ ಡೀನ್ ಡಾ.ಮಂಜುನಾಥ್ ಸಾರ್ವಜನಿಕರ ವಾಹನ ನಿಲ್ಲಿಸದಂತೆ ಸೂಚನೆ ನೀಡಿದ್ದಾರೆ.

ಜಿಲ್ಲಾ ಆಸ್ಪತ್ರೆಯ ಮುಂಭಾಗ ಸೂಕ್ತ ರೀತಿಯ ಗೇಟ್ ವ್ಯವಸ್ಥೆ ಇಲ್ಲದ ಕಾರಣಕ್ಕೆ ಸೆಕ್ಯುರಿಟಿಗಳು ತಾತ್ಕಾಲಿಕವಾಗಿ ಹಗ್ಗವನ್ನು ಕಟ್ಟಿಕೊಂಡು ಸಾರ್ವಜನಿಕರ ವಾಹನಗಳನ್ನು ತಡೆದು, ಜಿಲ್ಲಾಸ್ಪತ್ರೆ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ಹಾಗೂ ಜೋಡಿ ರಸ್ತೆಯಲ್ಲಿ ನಿಲ್ಲಿಸುವಂತೆ ಮಾರ್ಗದರ್ಶನ ಮಾಡುತ್ತಿದ್ದರು. ಸದ್ಯಕ್ಕೆ ಜಿಲ್ಲಾಸ್ಪತ್ರೆಯ ಹೊರಾಂಗಣದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳ ವಾಹನ ನಿಲುಗಡೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಮುಂದಿನ ವಾರದಲ್ಲಿ ಡೀನ್ ಅವರ ಸೂಚನೆಯಂತೆ ಆಸ್ಪತ್ರೆಯ ಮುಂಭಾಗ ಸೂಕ್ತವಾದ ಗೇಟ್ ಸೌಲಭ್ಯ ಕಲ್ಪಿಸಿ, ಕಟ್ಟು ನಿಟ್ಟಾಗಿ ವಾಹನ ನಿಲುಗಡೆಗೆ ನಿರ್ಭಂಧ ವಿಧಿಸಲಾಗುವುದು ಎಂದು ಹೆಸರು ಹೇಳಲು ಇಚ್ಛಿಸದ ಸೆಕ್ಯುರಿಟಿಯೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದರು.

ವಾಹನ ಸವಾರರ ಪರದಾಟ:
ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕ ವಾಹನಗಳ ನಿಲುಗಡೆಗೆ ನಿರ್ಭಂಧ ವಿಧಿಸಿರುವ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಯ ಡೀನ್ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾದರೂ, ಸಾಕಷ್ಟು ಜನರು ರೋಗಿಗಳನ್ನು ದ್ವಿಚಕ್ರವಾಹನಗಳಲ್ಲಿ ಕರೆದುಕೊಂಡು ಬಂದಾಗ ವಾಹನ ನಿಲುಗಡೆಗೆ ಪರದಾಡಿದರು. ಅಡ್ಡಲಾಗಿ ಹಗ್ಗ ಹಾಕಿದ್ದರೂ ಎಷ್ಟೋ ಜನರು ವಾಹನಗಳನ್ನು ಒಳ ತರಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಸೆಕ್ಯುರಿಟಿ ವಾಹನಗಳನ್ನು ತಡೆದು ನಿಲ್ಲಿಸುತ್ತಿದ್ದರು. ಇದರಿಂದ ತೀವ್ರನಿಗಾ ಘಟಕಕ್ಕೆ ಆಂಬುಲೆನ್ಸ್ ಸರಾಗವಾಗಿ ಬರಲು ಹಾಗೂ ರೋಗಿಗಳನ್ನು ಗಾಲಿ ಚಕ್ರಗಳಲ್ಲಿ ತಲ್ಲಿಕೊಂಡು ಹೋಗಲು ಅನುಕೂಲವಾಯಿತು.

ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕರು ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದರಿಂದ ರೋಗಿಗಳಿಗೆ, ಆಂಬುಲೆನ್ಸ್ ನಿಲುಗಡೆಗೆ ತೊಂದರೆ ಆಗುತ್ತಿತ್ತು. ಸಾಕಷ್ಟು ಜನರು ವಾಹನಗಳನ್ನು ಇಲ್ಲಿ ಪಾರ್ಕಿಂಗ್ ಮಾಡಿ ಮೈಸೂರು ಹಾಗೂ ಇತರ ಕಡೆ ಹೋಗುತ್ತಿದ್ದರು. ಇದನ್ನು ತಪ್ಪಿಸಿ, ಸಂಪೂರ್ಣವಾಗಿ ನೆರಳು ಮಾಡುವ ವ್ಯವಸ್ಥೆ ಮಾಡಲಾಗುತ್ತಿದ್ದು, ಇನ್ನು 15 ದಿನಗಳಲ್ಲಿ ಕೆಲಸವನ್ನು ಮುಗಿಸುತ್ತೇವೆ. ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇವೆ.-ಡಾ.ಮಂಜುನಾಥ್, ಡೀನ್ ಹಾಗೂ ನಿರ್ದೇಶಕ, ಸಿಮ್ಸ್ ಆಸ್ಪತ್ರೆ, ಚಾಮರಾಜನಗರ.

ಜಿಲ್ಲಾಸ್ಪತ್ರೆಯ ಹೊರ ಆವರಣದಲ್ಲಿ ಸಾರ್ವಜನಿಕರು ಅಡ್ಡಆದಿಡ್ಡಿಯಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದರಿಂದ ರೋಗಿಗಳಿಗೆ ತುಂಬಾ ಸಮಸ್ಯೆ ಉಂಟಾಗಿತ್ತಿತ್ತು. ಇಲ್ಲಿ ಸಾರ್ವಜನಿಕ ವಾಹನಗಳಿಗೆ ನಿರ್ಬಂಧ ವಿಧಿಸಿರುವುದು ಸ್ವಾಗತಾರ್ಹ. ಇದು ಕಟ್ಟು ನಿಟ್ಟಾಗಿ ಪಾಲನೆಗೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸೆಕ್ಯುರಿಟಿಗಳನ್ನು ನೇಮಕ ಮಾಡಿಕೊಳ್ಳಬೇಕು.-ಮಹೇಶ್, ನಿವಾಸಿ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net