ಶಿಕ್ಷಣದ ಗುಣಮಟ್ಟ, ಮೌಲ್ಯ ಮತ್ತಷ್ಟು ಹೆಚ್ಚಲಿ

05raju1
Published on

ಚಾಮರಾಜನಗರ: ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣ ಅಗತ್ಯವಿದ್ದು, ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣದ ಗುಣಮಟ್ಟ, ಮೌಲ್ಯ ಇನ್ನೂ ಹೆಚ್ಚಳವಾಗಬೇಕಿದೆ. ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಕಲಿಸಬೇಕು. ಶಿಲೆಯನ್ನು ಕೆತ್ತಿ ಸುಂದರ ಮೂರ್ತಿಯಾಗಿಸುವ ಶಿಲ್ಪಿಯಂತೆ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಯಾಗಿಸಿ ರೂಪುಗೊಳಿಸುವ ಶಿಕ್ಷಕರ ಜವಾಬ್ದಾರಿ ಅತ್ಯಂತ ಮಹತ್ವದಾಗಿದೆ. ಆರ್ಥಿಕ, ಸಾಮಾಜಿಕವಾಗಿ ಸ್ವಾವಲಂಬಿ ಬದುಕು ನಡೆಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವ ಶಿಕ್ಷಕರ ಪಾತ್ರ ಬಹು ದೊಡ್ಡದು ಎಂದು ತಿಳಿಸಿದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆ ರಾಜ್ಯದಲ್ಲಿ 7ನೇ ಸ್ಥಾನ ಪಡೆದಿತ್ತು. ಈ ಬಾರಿ ಮೊದಲ ಸ್ಥಾನ ಅಲಂಕರಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಶಾಸಕರು ಇದೇ ವೇಳೆ ನಿರ್ದೇಶನ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ಡಾ.ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಎಲ್ಲರೂ ಸ್ಮರಿಸಬೇಕು. ಕರ್ತವ್ಯ ನಿರತ ಶಿಕ್ಷಕರೆಲ್ಲರೂ ಉತ್ತಮ ಶಿಕ್ಷಕರೇ ಆಗಿದ್ದಾರೆ. ಶಿಕ್ಷಕರ ಸೇವೆಯನ್ನು ಸಮಾಜ ಸದಾ ಸ್ಮರಿಸುತ್ತದೆ ಎಂದರು.
ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಡಾ.ರಾಧಾಕೃಷ್ಣನ್ ಅವರು ಅತ್ಯುನ್ನತ ಹುದ್ದೆ ಅಲಂಕರಿಸಿದರೂ ಅವರಿಗೆ ಶಿಕ್ಷಕ ವೃತ್ತಿ ಹೆಚ್ಚು ಪ್ರೀತಿಗೆ ಪಾತ್ರವಾಗಿತ್ತು. ಶಿಕ್ಷಣಕ್ಕೆ ಮಾತೃ ಶಕ್ತಿಯಾಗಿರುವ ಸಾವಿತ್ರಿಬಾಯಿ ಫುಲೆ ಅವರನ್ನು ಬ್ರಿಟಿಷ್ ಸರ್ಕಾರ ಮೊದಲ ಮಹಿಳಾ ಶಿಕ್ಷಕಿ ಎಂದು ಘೋಷಿಸಿದೆ ಎಂದರು.

ಪ್ರಸ್ತುತ ಶಿಕ್ಷಕರ ದಿನಾಚರಣೆಯಲ್ಲಿ ಅಂಬೇಡ್ಕರ್ ಅವರ ಸ್ಮರಣೆ ಮಾಡಿಕೊಳ್ಳಬೇಕಿದೆ. ಶಿಕ್ಷಣ, ಸಂಘಟನೆ ಹೋರಾಟದ ಮಹತ್ವದ ಬಗ್ಗೆ ಅಂಬೇಡ್ಕರ್ ತಿಳಿಸಿಕೊಟ್ಟಿದ್ದಾರೆ. ಶಿಕ್ಷಣ ಎಂಬ ಬೆಳಕಿನ ಅರಿವು ಎಲ್ಲರಿಗೂ ಬೇಕು. ಶಿಕ್ಷಕರು ಸದಾ ಕಾಲ ಬೆಳಗುವ ದೀಪಗಳಂತೆ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಗರಸಭೆ ಸದಸ್ಯ ಮಹೇಶ್ ಗಾಳೀಪುರ, ಡಯಟ್ ಉಪನಿರ್ದೇಶಕ ಮತ್ತು ಪ್ರಾಂಶುಪಾಲ ಎಂ.ಕಾಶಿನಾಥ್, ಚಾಮರಾಜನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸೋಮಣ್ಣೇಗೌಡ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net