ಬಿಸಿಲ ತಾಪಕ್ಕೆ ಬತ್ತುತ್ತಿದೆ ಅಂತರ್ಜಲ

4
Published on

ಗುಂಡ್ಲುಪೇಟೆ: ದಿನೇ ದಿನೆ ಏರಿಕೆಯಾಗುತ್ತಿರುವ ಬಿಸಿಲಿನ ತಾಪಮಾನದಿಂದ ತಾಲೂಕಿನ ಕೆರೆಕಟ್ಟೆಗಳು ಬತ್ತುತ್ತಿದ್ದು, ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ.

ಕಳೆದ ವರ್ಷ ಕೊಳವೆ ಬಾವಿಗಳಿಂದ ಮೇಲಕ್ಕೆ ಉಕ್ಕುತ್ತಿದ್ದ ನೀರು ಗಣನೀಯವಾಗಿ ಇಳಿಕೆಯಾಗುವ ಮೂಲಕ ಸದ್ಯದಲ್ಲಿ ಮಳೆ ಬೀಳದಿದ್ದರೆ ಅಂತರ್ಜಲ ಮಟ್ಟ ಪಾತಾಳಕ್ಕಿಳಿಯುವ ಭೀತಿ ಎದುರಾಗಿದೆ. ಇದರಿಂದ ಆತಂಕಕ್ಕೊಳಗಾಗಿರುವ ರೈತರು, ತಾಲೂಕು ಮತ್ತೆ ಅಂತರ್ಜಲ ಸಮಸ್ಯೆಗೆ ಒಳಗಾಗುವ ಮೊದಲೇ ಕೂಡಲೇ ಕೆರೆಗಳಿಗೆ ನದಿ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯಡಿ ಜೂನ್‌ನಿಂದಲೇ ನೀರು ಹರಿಸಲಾಗಿತ್ತು. ಇದರೊಂದಿಗೆ, ಉತ್ತಮ ಮಳೆಯೂ ಬಿದ್ದ ಪರಿಣಾಮ ಮೂರು ದಶಕಗಳಿಂದ ತುಂಬದ ಕೊಡಸೋಗೆ ಕೆರೆ, ಬೊಮ್ಮಲಾಪುರ ಕೆರೆ, ಕಲ್ಲುಕಟ್ಟೆ ಜಲಾಶಯ ಮುಂತಾದ ದೊಡ್ಡ ದೊಡ್ಡ ಕೆರೆಕಟ್ಟೆಗಳು ತುಂಬಿ ಕೋಡಿ ಬಿದ್ದಿದ್ದವು. ಹಳ್ಳಕೊಳ್ಳಗಳು ತುಂಬಿ ಹರಿದು ಬತ್ತಿಹೋಗಿದ್ದ ಗುಂಡ್ಲು ಮಾರ್ಗದಲ್ಲಿ ನೀರು ಹರಿದಿತ್ತು. ಇದರಿಂದ ಬಹುತೇಕ ಗ್ರಾಮಗಳಲ್ಲಿ ವರ್ಷಪೂರ್ತಿ ಕೊಳವೆ ಬಾವಿಗಳಿಂದ ನೀರು ಉಕ್ಕಿ ಹರಿಯುತ್ತಿತ್ತು.

ಆದರೆ, ಈ ಬಾರಿ ಸಕಾಲದಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಗಳು ಬೀಳದೆ ತಾಲೂಕಿನ ರೈತರ ಜೀವನಾಧಾರವಾಗಿದ್ದ ಸೂರ್ಯಕಾಂತಿ, ಮುಸುಕಿನಜೋಳ, ಜೋಳ ಮುಂತಾದ ಬೆಳೆಗಳು ಬಹುತೇಕ ಕೈಕೊಟ್ಟಿವೆ. ಅಲ್ಲದೆ, ದಿನೇದಿನೆ ಏರುತ್ತಿರುವ ಬಿಸಿಲ ತಾಪಕ್ಕೆ ಇತ್ತೀಚೆಗೆ ಬಿತ್ತನೆ ಮಾಡಿರುವ ಮುಸುಕಿನ ಜೋಳ ಹಾಗೂ ಹುರುಳಿ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡುತ್ತಿವೆ. ಕಳೆದ ಬಾರಿ ಕೋಡಿ ಬಿದ್ದಿದ್ದ ಕೊಡಸೋಗೆ ಕೆರೆ, ಬೊಮ್ಮಲಾಪುರ ಕೆರೆ, ಕಲ್ಲುಕಟ್ಟೆ ಜಲಾಶಯ ಮುಂತಾದ ದೊಡ್ಡ ದೊಡ್ಡ ಕೆರೆಕಟ್ಟೆಗಳಲ್ಲಿ ಈಗಾಗಲೇ ಬಹುತೇಕ ನೀರು ಖಾಲಿಯಾಗಿದೆ. ಸಣ್ಣಪುಟ್ಟ ಕೆರೆಗಳು ಸಹ ಬತ್ತುತ್ತಿವೆ. ತಾಲೂಕಿನ ಪ್ರಮುಖ ಅಂತರ್ಜಲ ಮೂಲವಾಗಿರುವ ಕಲ್ಲುಕಟ್ಟೆ ಜಲಾಶಯ ಅರ್ಧಕ್ಕಿಂತ ಹೆಚ್ಚು ಬತ್ತಿ ಹೋಗಿರುವುದರಿಂದ ಈ ಕಟ್ಟೆಯ ನೀರಿನಿಂದ ಅಂತರ್ಜಲ ದೊರಕುತ್ತಿದ್ದ ಪ್ರದೇಶಗಳ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ.

ಇನ್ನು ಸ್ವಲ್ಪ ದಿನಗಳಲ್ಲಿ ಮಳೆ ಸುರಿಯದಿದ್ದರೆ ತಾಲೂಕಿನ ಅಂತರ್ಜಲ ಮಟ್ಟ ಇಳಿಕೆ ಆಗುವ ಅಪಾಯ ಎದುರಾಗಿದ್ದು ಇದೇ ಪರಿಸ್ಥಿತಿ ಮುಂದುವರಿದರೆ ತಾಲೂಕು ಹಿಂದಿನಂತೆಯೇ ಅಂತರ್ಜಲ ಸಮಸ್ಯೆಗೆ ಸಿಲುಕಿಕೊಳ್ಳುವ ಸಂಭವವಿದೆ. ಆದ್ದರಿಂದ, ಇನ್ನಾದರೂ ಹೊಸ ಶಾಸಕರು ತಾಲೂಕಿನ ಕೆರೆಗಳಿಗೆ ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಕಾವೇರಿ ನೀರಿನ ವಿವಾದ ಎದುರಿಸುತ್ತಿರುವ ಸರ್ಕಾರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಲಿದೆಯೇ ಎಂಬುದು ಸಾರ್ವಜನಿಕರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ನೀರಿನ ಮಟ್ಟ ಅಧ್ಯಯನ
ಅಂತರ್ಜಲವನ್ನು ಅತಿಯಾಗಿ ಬಳಕೆ ಮಾಡಿಕೊಂಡಿರುವ ತಾಲೂಕುಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಕೇಂದ್ರ ಸರ್ಕಾರ ಅಟಲ್ ಭೂಜಲ್ ಯೋಜನೆ ಜಾರಿಗೆ ತಂದಿದ್ದು, ಇದರಲ್ಲಿ ಗುಂಡ್ಲುಪೇಟೆಯೂ ಸೇರಿದೆ. ಯೋಜನೆಯು ತಾಲೂಕಿನ 34 ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿಯೂ ಒಂದೊಂದು ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಆಧ್ಯಯನ ಮಾಡುತ್ತಿದೆ. ಇದರ ಪ್ರಕಾರ ಅಣ್ಣೂರು, ಪಡಗೂರು, ಮೂಖಹಳ್ಳಿ, ನೇನೆಕಟ್ಟೆ ಸೇರಿದಂತೆ ನಾಲ್ಕು ಪಂಚಾಯಿತಿಗಳಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಶಿಂಡನಪುರ, ಹುಂಡೀಪುರ, ಕೂತನೂರು, ಆಲತ್ತೂರು, ವಡ್ಡಗೆರೆ, ಬರಗಿ, ಕಬ್ಬಹಳ್ಳಿ, ಬೇಗೂರು ಹಾಗೂ ಸೋಮಹಳ್ಳಿ ಸೇರಿ 9 ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು ಉಳಿದ 21ರಲ್ಲಿ ಸಾಧಾರಣ ಮಟ್ಟದಲ್ಲಿದೆ.

ಕಳೆದ ವರ್ಷ ಉತ್ತಮ ಮಳೆ ಹಾಗೂ ಕೆರೆಗಳಿಗೆ ನೀರು ತುಂಬಿಸಿದ ಪರಿಣಾಮ ಮೇಲೇರಿದ್ದ ಅಂತರ್ಜಲ ಮಟ್ಟ ಕಳೆದ ಒಂದು ತಿಂಗಳಿನ ಆವಧಿಯಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಿದೆ. ಕೆರೆಗಳ ಪಕ್ಕದಲ್ಲಿರುವ ಕೆಲವು ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಸುಧಾರಿಸಿದ್ದರೆ, ಹಿಂದಿನಿಂದಲೂ ಅಂತರ್ಜಲ ಸಮಸ್ಯೆ ಎದುರಿಸುತ್ತಿದ್ದ ಶಿಂಡನಪುರ ಮುಂತಾದ ಕೆಲವು ಪಂಚಾಯಿತಿಗಳ ವ್ಯಾಪ್ತಿಯಲ್ಲ್ಲಿ ಕೆಳಗಿಳಿಯುತ್ತಿದೆ.-ಸಂತೋಷ್, ಅಟಲ್ ಭೂಜಲ್ ಯೋಜನೆಯ ಜಲಸಂಪನ್ಮೂಲ ತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net