

ಗುಂಡ್ಲುಪೇಟೆ: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸುವ ಪದ್ಧತಿಯೂ ಬದಲಾಗಬೇಕಾಗಿದ್ದು, ಇದಕ್ಕೆ ಪೂರಕವಾಗಿ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನಿಯೋಜಿಸದ ಪರಿಣಾಮ, ಕಲಿಕೆ ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚೆಗೆ ನಡೆದ ವರ್ಗಾವಣೆಯಿಂದ ಇನ್ನೂ ಸಮಸ್ಯೆ ಹೆಚ್ಚಾಗಿದ್ದು, ಹಲವಾರು ಶಾಲೆಗಳಲ್ಲಿ ಕೊರತೆಯಾಗಿದೆ. ಇದನ್ನು ತಪ್ಪಿಸಲು ಸರ್ಕಾರ ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ ಸೌಲಭ್ಯ ನೀಡುತಿದ್ದು, ಮುಂದಿನ ದಿನಗಳಲ್ಲಿ ಸ್ವಯಂಸೇವಾ ಸಂಸ್ಥೆಗಳ ನೆರವನ್ನು ಪಡೆದುಕೊಳ್ಳಲಾಗುವುದು. ಶಾಲೆಗಳ ಕೊಠಡಿ ನಿರ್ಮಾಣ ಹಾಗೂ ದುರಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಯಡವನಹಳ್ಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ 250 ಮಕ್ಕಳ ಸ್ಥಳದಲ್ಲಿ 450 ವಿದ್ಯಾರ್ಥಿಗಳಿರುವುದರಿಂದ ಗರಗನಹಳ್ಳಿಯಲ್ಲಿ ಮತ್ತೊಂದು ಶಾಲೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಹೇಳಿದರು.
ಮುಖ್ಯ ಭಾಷಣ ಮಾಡಿದ ಮೈಸೂರು ಡಯಟ್‌ನ ಹಿರಿಯ ಉಪನ್ಯಾಸಕ ಎಸ್.ಪಿ.ನಾಗರಾಜು, ಸ್ವಸ್ಥ ಸಮಾಜದ ನಿರ್ಮಾಣದ ಹೊಣೆ ಹೊತ್ತಿರುವ ಶಿಕ್ಷಕರು ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಅಪ್ಡೇಟ್ ಆಗುತ್ತಿರಬೇಕು ಎಂದು ಹೇಳಿದರು.
ಬಿಇಒ ರಾಜಶೇಖರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಊಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅನಿತಾ ‘ಹರ ಹರ ಶಂಭೋ ಶಂಭೋ’ ಹಾಡಿಗೆ ಭರತನಾಟ್ಯ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದರು. ಸ್ವಯಂಸೇವಾ ಸಂಸ್ಥೆ ವತಿಯಿಂದ ಅಂಗವಿಕಲರಿಗೆ ನಾನಾ ಸವಲತ್ತುಗಳನ್ನು ವಿತರಿಸಲಾಯಿತು. ನಿವೃತ್ತಿ ಹೊಂದಿದ ಪ್ರಾಥಮಿಕ, ಪ್ರೌಢಶಾಲೆಗಳ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪುರಸಭೆ ಸದಸ್ಯರಾದ ಕುಮಾರ್, ಹೀನಾಕೌಸರ್, ಅಣ್ಣಯ್ಯಸ್ವಾಮಿ, ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಅಧ್ಯಕ್ಷ ಆರ್.ಜಯರಾಂ, ಆಲತ್ತೂರು, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಮಹೇಶ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಸಹಕಾರ ಬ್ಯಾಂಕ್ ನಿರ್ದೇಶಕ ಜಿ.ಮಡಿವಾಳಪ್ಪ, ಜಿಪಂ ಮಾಜಿ ಸದಸ್ಯ ಬಿ.ಎಂ.ಮುನಿರಾಜು, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತರರು ಇದ್ದರು.