

ಚಾಮರಾಜನಗರ: ಸುಮಾರು 44 ಕಳವು ಪ್ರಕರಣಗಳಲ್ಲಿ 1.24 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಮಾಹಿತಿ ನೀಡಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ 2023ನೇ ಸಾಲಿನಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಸ್ವತ್ತುಗಳ ಪ್ರದರ್ಶನ ಮತ್ತು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ವರ್ಷದಲ್ಲಿ 70 ಕಳವು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 44 ಪ್ರಕರಣಗಳನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪತ್ತೆಹಚ್ಚಿ 1,34,46,261 ರೂ. ಮೌಲ್ಯದ ಚಿನ್ನ, ಬೆಳ್ಳಿ, ಮೋಟಾರ್ ವಾಹನಗಳು ಹಾಗೂ ನಗದು ಹಣವನ್ನು ಪ್ರದರ್ಶನ ಮಾಡಿ ವಾರಸುದಾರರಿಗೆ ಮರಳಿ ತಲುಪಿಸಲಾಗಿದೆ ಎಂದು ತಿಳಿಸಿದರು.
ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ, ಪೂರ್ವ ಪೊಲೀಸ್ ಠಾಣೆ, ಕೊಳ್ಳೇಗಾಲ ಪಟ್ಟಣ, ಗ್ರಾಮಾಂತರ, ಯಳಂದೂರು ಪಟ್ಟಣ, ರಾಮಾಪುರ, ಕುದೇರು, ಗುಂಡ್ಲುಪೇಟೆ ಪಟ್ಟಣ ಪೊಲೀಸ್ ಠಾಣೆಗಳು ಹಾಗೂ ಮತ್ತಿತರ ಠಾಣೆಗಳಲ್ಲಿ ದಾಖಲಾಗಿದ್ದ ಸುಮಾರು 20 ಪ್ರಕರಣಗಳಲ್ಲಿ 1.09 ಕೋಟಿ ರೂ. ಬೆಲೆಬಾಳುವ 1 ಕೆಜಿ 957.5 ಗ್ರಾಂ ಚಿನ್ನ ಮತ್ತು 5 ಕೆಜಿ 618 ಗ್ರಾಂ ಬೆಳ್ಳಿಯನ್ನು ಹಿಂದಿರುಗಿಸಲಾಗಿದೆ. ಸುಮಾರು 9 ಪ್ರಕರಣಗಳಲ್ಲಿ 2 ದ್ವಿಚಕ್ರ ವಾಹನ ಸೇರಿದಂತೆ 3.20 ಲಕ್ಷ ರೂ. ಮೌಲ್ಯದ ವಾಹನಗಳನ್ನು ನೀಡಲಾಗಿದೆ. 2 ಪ್ರಕರಣಗಳಲ್ಲಿ 7.65 ಲಕ್ಷ ರೂ. ಬೆಲೆಬಾಳುವ 5 ಮೋಟಾರು ವಾಹನಗಳು, 4 ಪ್ರಕರಣಗಳಲ್ಲಿ 10.20 ಲಕ್ಷ ರೂ. ನಗದು ಹಾಗೂ 9 ಪ್ರಕರಣಗಳಲ್ಲಿ 3.77 ಲಕ್ಷ ರೂ. ಮೌಲ್ಯದ ಬ್ಯಾಟರಿ, ಎಲೆಕ್ಟ್ರಿಕ್ ವಸ್ತುಗಳು, ತಾಮ್ರ ಮತ್ತು ಕಂಚಿನ ವಸ್ತುಗಳು ಹಾಗೂ ಇನ್ನಿತ್ಟ ವಸ್ತುಗಳನ್ನು ವಾರಸುದಾರರಿಗೆ ನೀಡಲಾಗಿದೆ ಎಂದರು.
ಜಿಲ್ಲೆಯ ಪೊಲೀಸರು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಕಳವು ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿ ಶ್ರಮವಹಿಸಿದ್ದಾರೆ. 44 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಪರಾಧಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯದ ಆದೇಶದಂತೆ ವಿವಿಧ ರೀತಿಯ ಶಿಕ್ಷೆ ವಿಧಿಸಿ ವಾರಸುದಾರರಿಗೆ ತಮ್ಮ ವಸ್ತುಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಳವು ಪ್ರಕರಣಗಳನ್ನು ಹಣ, ಒಡವೆ ಹಾಗೂ ಇನ್ನಿತರೆ ವಸ್ತುಗಳನ್ನು ಕಳೆದುಕೊಂಡವರಿಗೆ ಹಿಂದಿರುಗಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಹಾಗೂ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.