ಗಿರಿಜನರು ಪೌಷ್ಠಿಕ ಆಹಾರ ಸೇವಿಸಿ

04chn14
Published on

ಚಾಮರಾಜನಗರ : ರಾಷ್ಟ್ರೀಯ ಅಂಧತ್ವ ನಿಯಂತ್ರಣದಡಿ 2023-24ನೇ ಸಾಲಿನ ಆಶಾಕಿರಣ ಆಂದೋಲನ ಕಾರ್ಯಕ್ರಮದಡಿಯಲ್ಲಿ ಸಮಗ್ರ ನೇತ್ರ ತಪಾಸಣೆ ಮಾಡುವ ಸಲುವಾಗಿ ಪ್ರಾಥಮಿಕ ಹಂತದ ತಪಾಸಣಾ ಶಿಬಿರ ಮತ್ತು ರಕ್ತಹೀನತೆ ಬಗ್ಗೆ ಹೀಮೋಗ್ಲೋಬಿನ್ ಪರೀಕ್ಷೆ ಮಾಡುವ ಸಂಬಂಧ ಜಿಲ್ಲಾಮಟ್ಟದ ಗಿರಿಜನರ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಮರಾಜನಗರ ತಾಲೂಕು ಕನ್ನೇರಿ ಕಾಲೋನಿ ಗಿರಿಜನ ಹಾಡಿಯಲ್ಲಿ ಚಾಲನೆ ದೊರೆಯಿತು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ. ಮಂಜುಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಿರಿಜನ ಹಾಡಿಗಳಲ್ಲಿ ಸೋಲಿಗರು, ಕಾಡುಕುರುಬರು, ಜೇನುಕುರುಬರು ವಾಸಿಸುತ್ತಿದ್ದು, ಹಾಡಿಯ ಗರ್ಭಿಣಿಯರು ಅನೀಮಿಯಾ ಸಮಸ್ಯೆಯಿಂದ ಮುಕ್ತರಾಗಲು ಉತ್ತಮ ಪೌಷ್ಠಿಕ ಆಹಾರ ಸೇವಿಸಬೇಕು. ನಿಯಮಿತವಾಗಿ ತಜ್ಞವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಹಾಡಿಯಲ್ಲಿ ವಾಸಿಸುವ ಪ್ರತಿಯೊಬ್ಬರು ಹಿಮೋಗ್ಲೋಬಿನ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಡಾ. ಚಂದ್ರಶೇಖರ್ ಮಾತನಾಡಿ, ಹಿಮೋಗ್ಲೋಬಿನ್ ಮಟ್ಟ ಕನಿಷ್ಠ 12 ರಿಂದ 14 ಗ್ರಾಂ ಇರಬೇಕು. ಆದರೆ ಗಿರಿಜನರಲ್ಲಿ ಇದಕ್ಕಿಂತ ಕಡಿಮೆ ಇದ್ದು, ಗಿರಿಜನರು ಹಿಮೋಗ್ಲೋಬಿನ್ ಪರೀಕ್ಷೆ ಮಾಡಿಸಿಕೊಂಡು ರಕ್ತಹೀನತೆ ಇರುವವರು ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು. ಸಮಗ್ರ ನೇತ್ರ ತಪಾಸಣೆ ಮತ್ತು ಉಚಿತ ಶಸ್ತ್ರಚಿಕಿತ್ಸೆ (ಆಶಾಕಿರಣ ಆಂದೋಲನ) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಸೆ.5ರಿಂದ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಪ್ರಾಥಮಿಕ ಹಂತದ ಕಣ್ಣಿನ ತಪಾಸಣೆ ನಡೆಸಲಿದ್ದಾರೆ. ಪ್ರತಿಯೊಬ್ಬರು ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು. ಕಣ್ಣಿನ ತೊಂದರೆಯಿರುವ ವ್ಯಕ್ತಿಗಳನ್ನು ದ್ವಿತೀಯ ಹಂತದ ತಪಾಸಣೆಗೆ ಒಳಪಡಿಸಿ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್, ಪುಣಜನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಿಬಾಯಿ, ವೈದ್ಯಾಧಿಕಾರಿ ಡಾ.ಜನಾರ್ಧನ್, ಡಾ. ಮಮತಾಕುಮಾರಿ, ಡಾ. ಶ್ರೀಕಾಂತ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಪ್ರಕಾಶ್, ಜಿಲ್ಲಾ ಆರೋಗ್ಯ ಶಿಕ್ಷಾಣಾಧಿಕಾರಿ ದೊರೆಸ್ವಾಮಿ ನಾಯಕ್, ಕನ್ನೇರಿ ಕಾಲೋನಿ ಹಾಡಿಯ ಯಜಮಾನರಾದ ಕೊಣ್ಣೂರೇಗೌಡ, ಸಮುದಾಯದ ಮುಖಂಡರಾದ ಶಿವಣ್ಣ, ಪಾರ್ವತಮ್ಮ, ಐಹೆಚ್‌ಐಪಿ ತಂಡದ ಸದಸ್ಯರಾದ ಕ್ಯಾತದೇವೇಗೌಡ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net