ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಂತ ‘ಗೃಹಲಕ್ಷ್ಮಿ’

04raju1
Published on

ಚಾಮರಾಜನಗರ: ನನ್ನ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿದೆ ಆದರೆ ತೆಗೆದುಕೊಳ್ಳಲು ಆಗುತ್ತಿಲ್ಲ, ಬ್ಯಾಂಕ್ ಖಾತೆ ಚಾಲ್ತಿಯಲ್ಲಿದ್ದರು ಅಕ್ಕಿ ದುಡ್ಡು ಬಂದಿಲ್ಲ, ವಾರದಿಂದ ಬ್ಯಾಂಕ್‌ಗೆ ಅಳೆದಾಡುತ್ತಿದ್ದರೂ ನನ್ನ ಬ್ಯಾಂಕ್ ಖಾತೆ ಚಾಲ್ತಿ ಆಗುತ್ತಿಲ್ಲ.

ಇದು ಗೃಹಲಕ್ಷ್ಮೀ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಲಾನುಭವಿ ಮಹಿಳೆಯರು ಬ್ಯಾಂಕ್ ಮುಂಭಾಗ ಸಾಲಿನಲ್ಲಿ ನಿಂತು ಬೇಸರದಿಂದ ಹಾಡಿದ ಮಾತುಗಳು. ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಮುಂಭಾಗ ಸೋಮವಾರ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿನ ಹಲವು ಗ್ರಾಮಗಳ ನೂರಾರು ಮಹಿಳೆಯರು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತು ಹೈರಾಣಾದರು. ಹಲವರು ಬೆಳಿಗ್ಗೆ ತಿಂಡಿ ತಿನ್ನದೇ ಸುಸ್ತಾಗಿ ಬಿದ್ದ ಸನ್ನಿವೇಶವೂ ಎದುರಾಯಿತು. ವಯಸ್ಸಾದ ಮಹಿಳೆಯರು ಸರದಿ ಸಾಲಿನಲ್ಲಿ ನಿಲ್ಲಲು ಆಗದೇ ಹಿಡಿಶಾಪ ಹಾಕುತ್ತ ಹಿಂದಿರುಗಿದರು. ಮಹಿಳೆಯರನ್ನು ನಿಯಂತ್ರಸುವಲ್ಲಿ ಪೊಲೀಸರು ಸುಸ್ತಾದರು.

ಈ ಸಂದರ್ಭದಲ್ಲಿ ಗುಂಡ್ಲಪೇಟೆ ತಾಲೂಕಿನ ಹಂಗಳ ಗ್ರಾಮದ ರಾಣಿ ಎಂಬುವವರು ಮಾತನಾಡಿ, ನಾನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯಳಾಗಿದ್ದು, ನನ್ನ ಖಾತೆಗೆ ಗೃಹಲಕ್ಷ್ಮೀ ಖಾತೆಯ ಹಣ ಜಮಾಗೊಂಡಿದೆ. ಆದರೆ ಖಾತೆ ಚಾಲ್ತಿಯಲ್ಲಿ ಇಲ್ಲದಾಗಿದ್ದು, ಅದನ್ನು ಮತ್ತೆ ಚಾಲ್ತಿಗೊಳಿಸಲು ಮನವಿ ಸಲ್ಲಿಸಲು ಬಂದಿದ್ದೇನೆ. ಬೆಳಿಗ್ಗೆಯಿಂದ ಸಾಲಿನಲ್ಲಿ ನಿಂತು ಸಾಕಾಗಿದೆ. ಬ್ಯಾಂಕ್‌ನವರು ಮತ್ತಷ್ಟು ಕೌಂಟರ್‌ಗಳನ್ನು ತೆರೆದು ಮಹಿಳೆಯರಿಗೆ ಅನುಕೂಲ ಮಾಡಬೇಕು ಎಂದು ಮನವಿ ಮಾಡಿದರು.

ಕರಿಗೌಡನಹಳ್ಳಿ ಗ್ರಾಮದ ಪ್ರೀತಿ ಎಂಬುವವರು ಮಾತನಾಡಿ, ಸುಮಾರು ಬೆಳಗ್ಗೆ 8 ಗಂಟೆಯಿಂದ ಬ್ಯಾಂಕ್ ಮುಂಭಾಗ ಕಾಯುತ್ತಿದ್ದೇವೆ. ನನ್ನ ಖಾತೆಗೆ ಗೃಹಲಕ್ಷ್ಮೀ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ನಗದು ಸಂದಾಯವಾಗಿದೆ. ಆದರೆ ನನ್ನ ಖಾತೆ ಚಾಲ್ತಿಯಾಗಿಲ್ಲ. 20 ದಿನಗಳ ನಂತರ ಚಾಲ್ತಿ ಆಗುತ್ತದೆ ಎಂದು ಹೇಳಿದ್ದರೂ, ತಿಂಗಳು ಕಳೆದರೂ ಆಗಿಲ್ಲ ಇದರಿಂದಾಗಿ ನಿತ್ಯವೂ ಪರದಾಡುವಂತಹ ಸ್ಥಿತಿ ಎದುರಾಗಿದೆ. ಆದಷ್ಟು ಬೇಗ ಬ್ಯಾಂಕ್ ಖಾತೆಗಳು ಚಾಲ್ತಿಯಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ನಮ್ಮದು ಕಾಡಂಚಿನ ಗ್ರಾಮವಾಗಿದ್ದು, ಬೆಳಿಗ್ಗೆ 6 ಗಂಟೆಯಿಂದ ಬ್ಯಾಂಕ್ ಮುಂದೆ ಕಾಯುತ್ತಿದ್ದೇನೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಯೂನಿಯನ್ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದು. ಈ ಖಾತೆಗೆ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬಂದಿದೆ. ಖಾತೆ ಚಾಲ್ತಿ ಇಲ್ಲದೇ ನಿತ್ಯವೂ ಪರದಾಡುವಂತಾಗಿದೆ.-ಜ್ಯೋತಿ, ಹಣ್ಣೂರು ಕೇರಿ, ಗುಂಡ್ಲುಪೇಟೆ.

ನನ್ನ ಮಡದಿಯ ಖಾತೆಗೆ ಗೃಹಲಕ್ಷ್ಮೀ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಸಂದಾಯವಾಗಿದೆ. ಯೂನಿಯನ್ ಬ್ಯಾಂಕ್‌ನಲ್ಲಿ ತೆಗೆದಿದ್ದ ನನ್ನ ಖಾತೆಯನ್ನು 20 ದಿನಗಳಲ್ಲಿ ಚಾಲ್ತಿಯಾಗುತ್ತದೆ ಎಂದು ಹೇಳಿದ್ದರು. ಕುಟುಂಬ ಸಮೇತ ಬ್ಯಾಂಕ್‌ಗೆ ಅಲೆದಾಡುವಂತಾಗಿದೆ.-ಕೃಷ್ಣ, ಪಂಜನಹಳ್ಳಿ, ಗುಂಡ್ಲುಪೇಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net