

ಚಾಮರಾಜನಗರ : ತಾಲೂಕಿನ ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿಯಮಬಾಹಿರವಾಗಿ ಅಡವಿಟ್ಟುಕೊಂಡಿರುವ ಚಿನ್ನವನ್ನು ಬಿಡಿಸಿಕೊಡಬೇಕೆಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಸೋಮವಾರ ನಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ಶ್ರೀಭುವನೇಶ್ವರಿ ವೃತ್ತದಲ್ಲಿ ಸೋಮವಾರ ಬೆಳಗ್ಗೆ ಜಮಾಯಿಸಿದ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಗುಂಪುಗೂಡಿದರು. ಪ್ರತಿಭಟನಕಾರರು ಸಹಕಾರ ಸಂಘ, ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ನಮಗೆ ನ್ಯಾಯ ಕೊಡಿಸುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ, ಇಲ್ಲೇ ನೆಲೆಯೂರುತ್ತೇವೆ ಎಂದು ಹೇಳಿದರು.
ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಸಹಕಾರ ಸಂಘದವರು ನಿಯಮ ಬಾಹಿರವಾಗಿ ರೈತರ ಚಿನ್ನವನ್ನು ಗಿರವಿ ಇಟ್ಟುಕೊಂಡಿದ್ದಾರೆ. ನಾವು ಹಣ ಕಟ್ಟುತ್ತೇವೆ ಎಂದರೂ ಚಿನ್ನವನ್ನು ವಾಪಸ್ ನೀಡುತ್ತಿಲ್ಲ. ರೈತರಿಂದ ಪಡೆದ ಚಿನ್ನವನ್ನು ಬೇರೆ ಬ್ಯಾಂಕ್‌ನಲ್ಲಿ ಹೆಚ್ಚಿನ ಬಡ್ಡಿಗೆ ಅಡಮಾನ ಇರಿಸಿದ್ದಾರೆ ಎಂದು ದೂರಿದರು.
ಇದೇ ವಿಚಾರವಾಗಿ ಈ ಹಿಂದೆಯೇ ಪ್ರತಿಭಟನೆ ನಡೆಸಲಾಗಿತ್ತು. ಆಗ ಪೊಲೀಸ್ ಇಲಾಖೆ ಚಿನ್ನವನ್ನು ವಾಪಸ್ ಕೊಡಿಸುವುದಾಗಿ 1 ತಿಂಗಳು ಕಾಲಾವಕಾಶ ಕೇಳಿತ್ತು. ಆದರೆ, ಇಲಾಖೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ನಾವು ಅಡವಿಟ್ಟಿರುವ ಚಿನ್ನವನ್ನು ಈ ಸಹಕಾರ ಸಂಘದವರು ಬೇರೆ ಕಡೆ ಅಡವಿಟ್ಟು ದುಡ್ಡನ್ನು ಪಡೆದುಕೊಂಡು ನಮಗೆ ಮೋಸ ಮಾಡಿದ್ದಾರೆ. ಸಹಕಾರ ಸಂಘದವರು ಬೇರೆಡೆ ಅಡವಿಟ್ಟಿರುವ ಚಿನ್ನವನ್ನು ಮುಟ್ಟುಗೊಲು ಹಾಕಿ ನ್ಯಾಯಾಲಯಕ್ಕೆ ಒಪ್ಪಿಸುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದರು.
ಎಂಪಿಗಳ ಬಾಯಿ ಗಿರವಿ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದಕ್ಕೆ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಕಿಡಿಕಾರಿದರು. ರಾಜ್ಯದ 28 ಲೋಕಾಸಭಾ ಸದಸ್ಯರು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಬಗ್ಗೆ ಮಾತನಾಡುತ್ತಿಲ್ಲ, ಇವರು ತಮ್ಮ ಬಾಯಿಗಳನ್ನು ಅಡವಿಟ್ಟಿದ್ದಾರೆ. ರಾಜ್ಯ ಸರ್ಕಾರ ಮುಂಬರುವ ಲೋಕಸಭೆ ಚುನಾವಣೆಯ ದೃಷ್ಟಿಯಲ್ಲಿ ತಮಿಳುನಾಡಿಗೆ ನೀರು ಬಿಡುತ್ತಿದೆ. ನಮ್ಮ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಆಗುತ್ತಿದೆ. ನಮ್ಮ ನಾಡಿನ ರೈತರಿಗೆ ಇದರಿಂದ ತೊಂದರೆ ಉಂಟಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕಬಿನಿ ಮತ್ತು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ರಾಜ್ಯದ ರೈತರನ್ನು ಬಲಿ ಕೊಡುತ್ತಿದೆ. ಮೇಕೆದಾಟು ಯೋಜನೆಯನ್ನು ಕೂಡಲೇ ಕೈಗೆತ್ತುಕೊಂಡು ಪೂರ್ಣಗೊಳಿಸುವುದರ ಕಡೆ ಗಮನ ಕೊಡಿ. ರೈತರ ಕೃಷಿ ಪಂಪ್‌ಸೆಟ್‌ಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಚುನಾವಣೆಗೂ ಮುನ್ನ ಹಗಲು ಹೊತ್ತಿನಲ್ಲಿ ನೀಡಿದ್ದ ಭರವಸೆಯಂತೆ 12 ಗಂಟೆ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿದರು.
ಬ್ಯಾಂಕ್‌ಗಳು ರೈತರಿಗೆ ಕೃಷಿ ಸಾಲ ನೀಡುವಾಗ ರೈತರಿಗೆ ತುಂಬಾ ಕಿರುಕುಳ ನೀಡುತ್ತಿವೆ. ಇದನ್ನು ತಪ್ಪಿಸಬೇಕು. ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೂ ಸ್ವಯಂ ಪ್ರೇರಿತ ಚಳವಳಿಯನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಹಾಲಿನ ನಾಗರಾಜು, ಪಟೇಲ್ ಶಿವಮೂರ್ತಿ, ಮಂಜುನಾಥ್, ಮಲೆಯೂರು ಹರ್ಷ, ಮಹೇಂದ್ರ, ಸತೀಶ್, ಪ್ರವೀಣ್, ಹರಳಿಕಟ್ಟೆ ಪ್ರಭುಸ್ವಾಮಿ, ಸಿದ್ದರಾಜು, ಬಸವರಾಜಪ್ಪ ಮತ್ತು ಇತರರು ಭಾಗವಹಿಸಿದ್ದರು.