ಬಾಲಕನ ಶವವಿಟ್ಟು ಪ್ರತಿಭಟನೆ

3chn4
Published on

ಕೊಳ್ಳೇಗಾಲ: ಪಟ್ಟಣದ ಜನನಿ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದ ಬಾಲಕನ ಶವ ಮರಣೋತ್ತರ ಪರೀಕ್ಷೆಯಾದ ನಂತರ ತಾಲೂಕಿನ ಹಳೇಹಂಪಾಪುರಕ್ಕೆ ತಂದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಅಪೆಂಡಿಕ್ಸ್ ಶಸಚಿಕಿತ್ಸೆಗೆ ಒಳಗಾಗಿದ್ದ ಆರ್.ವಿಜಯ್(10) ನಂತರ ಮೃತಪಟ್ಟಿದ್ದ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಆಸ್ಪತ್ರೆ ಆವರಣದಲ್ಲಿ ನ್ಯಾಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಭೇಟಿ ನೀಡಿ ಬಾಲಕನ ಶವ ಪರೀಕ್ಷೆ ನಡೆಸಿ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ಅದರಂತೆಯೇ ಭಾನುವಾರ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಹಳೇ ಹಂಪಾಪುರಕ್ಕೆ ಶವವನ್ನು ಕೊಂಡೊಯ್ಯಲಾಗಿತ್ತು. ಈ ವೇಳೆ ಗ್ರಾಮಸ್ಥರು ಮತ್ತು ಮೃತ ಬಾಲಕನ ಸಂಬಂಧಿಕರು ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಸ್ಥಳಕ್ಕೆ ಆಗಮಿಸಬೇಕು. ಎರಡು ವರ್ಷಗಳ ಹಿಂದೆ ಕರೊನಾದಿಂದ ಗಂಡನನ್ನು ಕಳೆದುಕೊಂಡು, ಈಗ ವೈದ್ಯರ ನಿರ್ಲಕ್ಷ್ಯದಿಂದ ಮಗನನ್ನೂ ಕಳೆದುಕೊಂಡು ಅನಾಥವಾಗಿರುವ ಗೌರಮ್ಮಳ ಜೀವನಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು. ಬಾಲಕನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದ್ದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಚಿತ್ರದುರ್ಗಕ್ಕೆ ಹೋಗಿರುವುದರಿಂದ ಸೋಮವಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸುವ ನಿರೀಕ್ಷೆ ಇದೆ. ಇವರೊಂದಿಗೆ ಡಿಸಿಯೂ ಬರಬಹುದು. ಹಳೇ ಹಂಪಾಪುರ ಬೀಗುವಿನ ವಾತಾವರಣದಿಂದ ಕೂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net