

ಕೊಳ್ಳೇಗಾಲ: ಕಾಡು ಹಂದಿ ಬೇಟೆಯಾಡಿ ಸಾಗಿಸುತ್ತಿದ್ದ ಮೂವರನ್ನು ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕೊಳ್ಳೇಗಾಲ ವನ್ಯಜೀವಿ ವಲಯದ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.
ಹನೂರು ತಾಲೂಕಿನ ಕಂಡಯ್ಯನಪಾಳ್ಯ ಗ್ರಾಮದ ಸುನೀಲ್ ಕುಮಾರ್(35), ರಂಗಸ್ವಾಮಿ(33) ಹಾಗೂ ನಾಗೇಶ್ (22) ಬಂಧಿಸಿ, ದ್ವಿಚಕ್ರ ವಾಹನ ಹಾಗೂ ಒಂದು ಆಯುಧವನ್ನು ಜಪ್ತಿ ಮಾಡಲಾಗಿದೆ. ಬಂಧಿತರು ಪಿಜಿ ಪಾಳ್ಯ ವಲಯ ಅರಣ್ಯ ಪ್ರದೇಶದಲ್ಲಿ ಕಾಡುಹಂದಿ ಬೇಟೆಯಾಡಿ ಸಾಗಿಸುತ್ತಿರುವುದನ್ನು ಖಚಿತಪಡಿಸಿಕೊಂಡ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಕಂಡಯ್ಯನಪಾಳ್ಯ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.