ಸಾವಿರಾರು ಜನರಿಗೆ ನೆಲೆ ಕಲ್ಪಿಸಿಕೊಟ್ಟ ಮಂಟೇಲಿಂಗಯ್ಯ

30raju1
Published on

ಚಾಮರಾಜನಗರ: ಅಂಬೇಡ್ಕರ್ ವಿಚಾರಗಳನ್ನು ಮಂಟೇಲಿಂಗಯ್ಯ ಅವರಷ್ಟು ಪರಿಣಾಮಕಾರಿಯಾಗಿ ಹೇಳಿದವರು ಕರ್ನಾಟಕದಲ್ಲಿ ಯಾರೂ ಇಲ್ಲ ಎಂದು ದಲಿತ ಮಹಾಸಭಾ ಅಧ್ಯಕ್ಷ ವೆಂಕಟರಮಣ ಪಾಪು ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಗದ್ದರ್ ಮಂಟೇಲಿಂಗಯ್ಯ ಹಾಗೂ ಜಿಗಿಣಿ ಶಂಕರ್ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕದಲ್ಲಷ್ಟೇ ಅಲ್ಲ, ತಮಿಳುನಾಡಿನಲ್ಲೂ ಮಂಟೇಲಿಂಗಯ್ಯ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಿರುಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ಹೀರೋಯಿಸಂಗೆ ಮನಸೋತು ಅಭಿಮಾನಿಗಳಾಗಿದ್ದು ಮರೆಯಲಾಗದು. ಕರ್ನಾಟಕಕ್ಕೆ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್‌ರನ್ನು ಪರಿಚಯಿಸಿದರು. ಮೈಸೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ನೆಲೆ ಇಲ್ಲದವರಿಗೆ ಮನೆ ಸಿಗುವಂತೆ ಮಾಡಿದರು ಎಂದರು.

ಪ್ರೊ.ಶಿವಸ್ವಾಮಿ ಮಾತನಾಡಿ, ಮೈಸೂರಿನ ಮಹಾರಾಜ ಕಾಲೇಜಿನ ಪ್ರೊ.ಕೆ.ರಾಮದಾಸ್, ಕಾಳೇಗೌಡ ನಾಗವಾರ, ಜಿ.ಎಚ್.ನಾಯಕ್ ಅವರು ಗದ್ದರ್ ಅವರನ್ನು ನಮಗೆಲ್ಲರಿಗೂ ಪರಿಚಯಿಸಿದರು. ಒಂದು ಬಾರಿ ಮಾನಸಗಂಗೋತ್ರಿಗೆ ಬಂದಿದ್ದರು. ಅಂದು ಅದ್ಭುತವಾದ ಚಿಂತನೆಗಳನ್ನು ಒಳಗೊಂಡ ಗೋಡೆ ಬರಹಗಳು ಎದ್ದು ಕಾಣುತ್ತಿದ್ದವು. ಕಾಲಿಗೆ ಗೆಜ್ಜೆ ಕಟ್ಟಿ, ಕೆಂಪು ರುಮಾಲು ಸುತ್ತಿಕೊಂಡು, ಬರಿಮೈ ಮೇಲೆ ಕಪ್ಪು ಶಾಲು ಹಾಕಿ, ಕೋಲು ಹಿಡಿದು ವಿಶಿಷ್ಟ ಭಂಗಿಯಲ್ಲಿ ನಿಂತು ಹಾಡುತ್ತಿದ್ದ ಗದ್ದರ್ ಅವರನ್ನು ಎಂದೂ ಮರೆಯಲಾಗದು ಎಂದು ಹೇಳಿದರು.

ಪ್ರೊ.ಕೃಷ್ಣಮೂರ್ತಿ ಚಮರಂ, ಸಂಸ್ಕೃತಿ ಚಿಂತಕ ಪ್ರೊ.ಮಹದೇವ ಶಂಕನಪುರ, ಪ್ರಗತಿಪರ ಸಂಘಟನೆಗಳು ಒಕ್ಕೂಟದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ, ಗುರುರಾಜು ಬಿ ಯರಗನಹಳ್ಳಿ, ಸಿ. ಎಂ.ನರಸಿಹಮೂರ್ತಿ ನುಡಿನಮನ ಸಲ್ಲಿಸಿದರು. ಬಾಬು, ಕುಮಾರ್, ಕಲೆ ನಟರಾಜ್ ಕ್ರಾಂತಿವೀರ ಹಾಡಿದರು. ಸಭೆಯಲ್ಲಿ ಅರಕಲವಾಡಿ ನಾಗೇಂದ್ರ, ಕೆ.ಎಂ.ನಾಗರಾಜು, ಸುಭಾಷ್ ಮಾಡ್ರಹಳ್ಳಿ, ಬೇಳೆಪೇಟೆ ಶಾಂತರಾಜು, ಡಾ.ಮಹೇಶ್ ಬಾಬು, ಬಸವಣ್ಣ ಎಸ್.ಮೂಕಹಳ್ಳಿ, ಡಾ.ನಂಜರಾಜು ಹೊಂಗನೂರು, ಡಾ.ಮಹೇಶ್ ಕೊಡಿಉಗನೆ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net