

ಯಳಂದೂರು : ಕಳೆದ ವರ್ಷ ಮಳೆಯಿಂದ ಫಸಲಿಗೆ ಹಾನಿಯಾದರೆ, *ಪ್ರಸುತ್ತ ವರ್ಷದಲ್ಲಿ ಮಳೆ ಇಲ್ಲದೆ ಭತ್ತದ ಬಿತ್ತನೆ ಕಾರ್ಯ ಕುಂಠಿತಗೊಂಡಿರುವುದರ ಜತೆಗೆ ರಾಗಿ, ಜೋಳದ ಬೆಳೆಯನ್ನೂ ಬೆಳೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿರುವುದು ರೈತರಿಗೆ ಸಂಕಷ್ಟ ತಂದಿದೆ.
ಪ್ರಸುತ್ತ ಋತುಮಾನಕ್ಕೆ ತಕ್ಕಂತೆ ಮಳೆ ಬಾರದೆ ಅದರಲ್ಲೂ ಅಕಾಲಿಕ ಮಳೆ ಅಥವಾ ಬರದಿಂದ ರೈತ ಕೃಷಿ ಕಾಯಕ ಮಾಡುವುದೋ ಬೇಡವೇ ಎಂಬ ಗೊಂದಲಕ್ಕೆ ಸಿಲುಕಿ ಕೃಷಿ ಕಾರ್ಯಗಳಿಗೆ ಹಿನ್ನಡೆ ಉಂಟಾಗುತ್ತಿದೆ. ಪ್ರತಿ ವರ್ಷ ಇಷ್ಟು ಹೊತ್ತಿಗೆ ರೈತರು ಜಮೀನು ಹಸನು ಮಾಡಿ, ಬಿತ್ತನೆ ಕಾರ್ಯದಲ್ಲಿ ತೊಡಗುತ್ತಿದ್ದರು. ಕಳೆದ ಹಲವು ದಿನಗಳಿಂದ ಒಂದಿಷ್ಟು ಮಳೆ ಸುರಿದಿದ್ದರಿಂದ ರೈತರು ಹಮ್ಮಸ್ಸಿನಿಂದ ಉಳುಮೆಗೆ ಸಜ್ಜಾಗಿದ್ದರು. ಆದರೆ ಮುಂದೆ ಮಳೆ ಮಾಯಾವಾಗಿದ್ದರಿಂದ ಮತ್ತೆ ನಿರಾಸೆಯ ಕಾರ್ಮೋಡ ಆವರಿಸಿದೆ.
ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆಗೆ ತಕ್ಕಂತೆ ಮಳೆ ಆಗದೇ ಇರುವುದರಿಂದ ಬೆಳೆಗಳು ಹಾನಿಗೀಡಾಗಿವೆ. ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯದೆ ಭೂಮಿಯಲ್ಲಿಯೇ ಕಮರಿಹೋಗುತ್ತಿವೆ. ಕೆರೆ, ಕಟ್ಟೆಗಳಲ್ಲಿ ನೀರಿಲ್ಲದ ಕಾರಣ ರಾಸುಗಳು ಸೇರಿದಂತೆ ಇತರ ಪ್ರಾಣಿಗಳಿಗೆ ನೀರು ಹಾಗೂ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇದೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 3 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಗುರಿ ಹೊಂದಲಾಗಿತ್ತು. ಇದಕ್ಕಾಗಿ ಕೃಷಿ ಇಲಾಖೆ 1600 ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜ ಸಂಗ್ರಹಿಸಿತ್ತು. ಆದರೆ ಈ ಬಾರಿ ಕೇವಲ 450 ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜವನ್ನು ರೈತರು ಖರೀದಿಸಿದ್ದು, ಉಳಿದ 1150 ಕ್ವಿಂಟಾಲ್ ಭತ್ತದ ಬೀಜ ಉಳಿದಿದೆ. ಅಲ್ಪಸ್ವಲ್ಪ ನೀರಾವರಿ ಸೌಲಭ್ಯವಿರುವ ಶೇ.25ರಷ್ಟು ಜಮೀನಿನ ರೈತರು ಭತ್ತದ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದು, ಉಳಿದ ಶೇ.75ರಷ್ಟು ಪ್ರದೇಶದಲ್ಲಿ ರೈತರು ರಾಗಿ, ಜೋಳ, ತರಕಾರಿ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ.
ವಿದ್ಯುತ್ ಪೂರೈಕೆಯೂ ಸ್ಥಗಿತ: ಪ್ರಸಕ್ತ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ತಾಲೂಕಿನಲ್ಲಿ ಜಮೀನುಗಳಿಗೆ ಪೂರೈಕೆಯಾಗಬೇಕಿರುವ 7 ಗಂಟೆ ಕಾಲ ವಿದ್ಯುತ್ ಸಮಪರ್ಕವಾಗಿ ಪೂರೈಕೆ ಮಾಡುತ್ತಿಲ್ಲ. ಪರಿಣಾಮ ತಾಲೂಕಿನ ಕೊಳವೆ ಬಾವಿ ಮೂಲಕ ಬೆಳೆದಿರುವ ಕಬ್ಬು, ಜೋಳ, ರಾಗಿ, ಬಾಳೆ ಫಸಲುಗಳಿಗೆ ಸಮಪರ್ಕವಾದ ವಿದ್ಯುತ್ ಪೂರೈಕೆಯಾಗದ ಪರಿಣಾಮ ಬೆಳೆಗಳು ಒಣಗಿ ಹೋಗುತ್ತಿವೆ. ಇದರಿಂದ ಬೇಸಾಯ ಮಾಡಲು ಕೂಲಿ ಕಾರ್ಮಿಕರಿಗೆ, ಔಷಧಕ್ಕೆ, ಜಮೀನು ಹದಮಾಡಿಕೊಳ್ಳಲು ಉಂಟಾಗಿರುವ ವೆಚ್ಚಗಳಿಗೆ ಖರ್ಚಾಗಿರುವ ಸಾವಿರಾರು ರೂ.ಗಳನ್ನು ಕಳೆದುಕೊಳ್ಳುವ ಆತಂಕ ರೈತರಿಗೆ ಎದುರಾಗಿದೆ.
ಕಟ್ಟು ನೀರಿನಿಂದ ಮತ್ತಷ್ಟು ಆತಂಕ: ಈ ಭಾಗ ಅರೆ ನೀರಾವರಿಯಾಗಿದ್ದು, ಕಬಿನಿ ಕಾಲುವೆಯ ನೀರು ಇಲ್ಲಿನ ರೈತರಿಗೆ ಆಸರೆಯಾಗಿದೆ.
ಆದರೆ ಈ ಬಾರಿ ಕಾಲುವೆಯಲ್ಲಿ ನಿರಂತರವಾಗಿ ನೀರು ಹರಿಯುತ್ತಿಲ್ಲ. ಹದಿನೈದು ದಿನ ಸತತವಾಗಿ ನೀರು ರಿಸಿ ನಂತರ ಹದಿನೈದು ದಿನ ನೀರು ನಿಲ್ಲಿಸುವ ಪದ್ಧತಿಯನ್ವಯ ಕಟ್ಟು ನೀರು ಬಿಡುವುದಾಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ನಾಲೆಯ ಕೊನೆಯ ಭಾಗದ ಜಮೀನುಗಳಿಗೆ ನೀರು ತಲುಪಿಲ್ಲ. ಇದರಿಂದ ರೈತರನ್ನು ಭತ್ತ ಬೆಳೆಯಲು ಯೋಚನೆ ಮಾಡುವಂತೆ ಮಾಡಿದೆ.
ನಮ್ಮಲ್ಲಿ ಭತ್ತದ ಬಿತ್ತನೆ ಬೀಜದ ದಾಸ್ತಾನಿದೆ. ಆದರೆ ಈ ಬಾರಿ ರೈತರಿಗೆ ಮಳೆಯ ಕೊರತೆ, ಜತೆಗೆ ಕಾಲುವೆಯಲ್ಲಿ ಕಟ್ಟು ನೀರು ಬಿಡುವ ಭರವಸೆ ನೀಡಿರುವ ಕಾರಣ ಬಿತ್ತನೆ ಬೀಜ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಬಾರಿಗಿಂತ ಕಡಿಮೆ ಕೃಷಿ ಭೂಮಿಯಲ್ಲಿ ಭತ್ತವನ್ನು ಬಿತ್ತನೆ ಮಾಡಲಾಗುತ್ತಿದೆ. ನೀರು ಇಲ್ಲಿದಿರುವುದರಿಂದ ಪರ್ಯಾಯ ಬೆಳೆಯನ್ನು ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ.ಅಮೃತೇಶ್ವರ, ಸಹಾಯಕ ಕೃಷಿ ನಿರ್ದೇಶಕ
ಈ ಬಾರಿ ಮಳೆ ಅಭಾವ ಹೆಚ್ಚಾಗಿದೆ. ವಿದ್ಯುತ್ ಅಭಾವವೂ ಇದೆ. ಕಳೆದ ಬಾರಿ ಅತಿವೃಷ್ಟಿ ಎದುರಿಸಿದ್ದ ರೈತ ಈ ಬಾರಿ ಬರದಿಂದ ಬಳಲುವ ಪರಿಸ್ಥಿತಿ ಇದೆ. ಕಾಲುವೆಯಲ್ಲಿ ನಮ್ಮ ಭಾಗದ ರೈತರಿಗೆ ನೀರನ್ನು ಹರಿಸದೆ ಪಕ್ಕದ ತಮಿಳುನಾಡಿಗೆ ನೀರು ಬಿಡುತ್ತಿರುವ ಧೋರಣೆಗೆ ರೈತರ ಧಿಕ್ಕಾರವಿದೆ.ಸೋಮಣ್ಣ, ರೈತ, ಗೌಡಹಳ್ಳಿ.