

ಚಾಮರಾಜನಗರ: ನಾಡಪ್ರಭು ಕೆಂಪೇಗೌಡರ ಆಡಳಿತ ವೈಖರಿ ನಮಗೆಲ್ಲ ಮಾದರಿ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯ ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಅವರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಂತ ದೊರೆಯಾಗಿದ್ದ ಕೆಂಪೇಗೌಡರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿ ಉಳಿದಿವೆ. ಅವರ ದೂರದೃಷ್ಟಿಯ ಫಲವಾಗಿ ಬೆಂಗಳೂರು ಬೃಹತ್ ನಗರವಾಗಿ ಬೆಳೆಯಲು ಕಾರಣವಾಗಿದೆ. ಸರ್ವ ಸಮುದಾಯಕ್ಕೂ ಕಸುಬಿನ ಆಧಾರಿತವಾಗಿ ಪೇಟೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಅವರನ್ನು ಸ್ಮರಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಹನೂರು ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು 62 ಕಸುಬು ಮಾಡುವವರನ್ನು ಕರೆ ತಂದು ಅನೇಕ ಪೇಟೆಗಳನ್ನು ಸ್ಥಾಪನೆ ಮಾಡಿದರು. ನೂರಾರು ಕೆರೆ, ದೇವಾಲಯ ನಿರ್ಮಾಣ ಮಾಡಿದರು ಎಂದು ಸ್ಮರಿಸಿದರು. ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ನಾಡುಪ್ರಭು ಕೆಂಪೇಗೌಡರು ನಾಡಿನ ಒಳಿತು, ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನಾಯಕರು. ಅವರು ನಿರ್ಮಾಣ ಮಾಡಿರುವ ಬೆಂಗಳೂರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡು ಪ್ರಮುಖ ನಗರವಾಗಿ ರೂಪುಗೊಂಡಿದೆ ಎಂದು ಹೇಳಿದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಚೇಗೌಡ, ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸರಸ್ವತಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಎಂ.ಬಿ.ಮಂಚೇಗೌಡ, ಸಮಾಜ ಸೇವಕ ಎ.ಕುಮಾರ್, ಮಹಾಸಭಾ ಗೌರವಾಧ್ಯಕ್ಷ ಶಾ.ಮುರಳಿ, ಪ್ರಧಾನ ಕಾರ್ಯದರ್ಶಿ ಚಾ.ವೆಂ.ರಾಜಗೋಪಾಲ್, ಸಹ ಕಾರ್ಯದರ್ಶಿ ಪಣ್ಯದಹುಂಡಿ ರಾಜು, ಕರಿಯನಕಟ್ಟೆ ಚಿನ್ನುಮುತ್ತು, ಸುರೇಶ್‌ಗೌಡ, ನಿಜಧ್ವನಿ ಗೋವಿಂದರಾಜು, ಚಿಕ್ಕತಾಯಮ್ಮ, ದೇವರಾಜು, ಗ್ರಾಪಂ ಸದಸ್ಯ ಚಿನ್ನಸ್ವಾಮಿ, ಮಹದೇವ, ಮಹೇಶ್‌ಗೌಡ, ನಾಗೇಂದ್ರ, ಬೆಳ್ಳೇಗೌಡ ಇತರರು ಹಾಜರಿದ್ದರು.