ರಾಜೀವ್‌ಗಾಂಧಿ ಜ್ಯೋತಿ ಯಾತ್ರೆಗೆ ಸ್ವಾಗತ

16raju3
Published on

ಚಾಮರಾಜನಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ರಾಜೀವ್‌ಗಾಂಧಿ ಜ್ಯೋತಿ ಯಾತ್ರೆ ಮಂಗಳವಾರ ಚಾಮರಾಜನಗರಕ್ಕೆ ಆಗಮಿಸಿದ್ದು, ಜಿಲ್ಲಾ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು.


ನಗರದ ಮುಖ್ಯದ್ವಾರದಿಂದ ಆಗಮಿಸಿದ ಜ್ಯೋತಿ ಯಾತ್ರೆಗೆ ಜ್ಯೋತಿಯನ್ನು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ನೇತೃತ್ವದಲ್ಲಿ ಮುಖಂಡರು ಜ್ಯೋತಿ ಸ್ವೀಕರಿಸಿ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ, ತಮಿಳುನಾಡಿನ ಪೆರಂಬದೂರಿಗೆ ಬೀಳ್ಕೊಟ್ಟರು.


ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿ, ಕಳೆದ 32 ವರ್ಷಗಳ ಹಿಂದೆ ಚುನಾವಣೆ ಪ್ರಚಾರಕ್ಕೆ ತೆರಳಿ ದೇಶದ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರು ಉಗ್ರರ ದಾಳಿಯಿಂದಾಗಿ ಪ್ರಾಣತ್ಯಾಗ ಮಾಡಿದ್ದರು. ಮೇ 21ರಂದು ಪೆರಂಬದೂರಿನಲ್ಲಿ ನಡೆದ ಕಹಿ ಘಟನೆಯಿಂದಾಗಿ ದೇಶವೇ ಭಯೋತ್ಪಾದನೆಯಿಂದ ಬೆಚ್ಚಿ ಬಿತ್ತಿತ್ತು. ಉಗ್ರಗಾಮಿಗಳು ಹಾಗೂ ಭಯೋತ್ಪಾದನೆಯನ್ನು ಬುಡಸಮೇತ ಕಿತ್ತು ಹಾಕಬೇಕೆಂದು ಸಂಕಲ್ಪ ಮಾಡಿ, ದೇಶಾದ್ಯಂತ ಜಾಗೃತಿ ಮೂಡಿಸಲು ಮೇ 15 ರಿಂದ 21ರವರೆಗೆ ವಿವಿಧೆಡೆ ಸಂಚರಿಸಲಿರುವ ಯಾತ್ರೆ ಪರಂಬದೂರಿನಲ್ಲಿ ಅಂತ್ಯವಾಗಲಿದೆ ಎಂದರು.


ದೇಶ ಕಂಡ ಪ್ರಧಾನಿಗಳಲ್ಲಿ ರಾಜೀವ್‌ಗಾಂಧಿ ಅಗ್ರಗಣ್ಯರು. ಅಂದೇ ಅವರು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿದ್ದರು. ಅದರ ಪರಿಣಾಮ ಇಂದು ಡಿಜಿಟಲ್ ಮತ್ತು ಮೊಬೈಲ್ ಕ್ರಾಂತಿಯಾಗಿದೆ. 18 ವರ್ಷದವರಿಗೆ ಮತದಾನದ ಹಕ್ಕು ನೀಡಿದವರು ರಾಜೀವ್‌ಗಾಂಧಿ ಎಂದರು.


30 ವರ್ಷಗಳ ಹಿಂದೆಯೇ ಯುವ ಜನಾಂಗ ಸಕ್ರಿಯ ರಾಜಕಾರಣದಲ್ಲಿ ಇರಬೇಕು ಎಂದು ರಾಜೀವ್ ಕನಸು ಕಂಡಿದ್ದರು. ಹಾಗಾಗಿ ಇಂದಿಗೂ ಅವರೇ ಯುವ ಜನಾಂಗದ ಐಕಾನ್ ಎಂದು ರವಿಕುಮಾರ್ ಬಣ್ಣಿಸಿದರು. ಜ್ಯೋತಿ ಯಾತ್ರಾ ಸಮಿತಿ ಅಧ್ಯಕ್ಷ ಆರ್. ದೊರೆವೇಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಚುಡಾ ಮಾಜಿ ಅಧ್ಯಕ್ಷ ಸುಹೇಲ್ ಆಲಿ ಖಾನ್, ಮಾಧ್ಯಮ ಕಾರ್ಯದರ್ಶಿ ಅರುಣ್‌ಕುಮಾರ್, ಮುಖಂಡರಾದ ದೊಡ್ಡರಾಯಪೇಟೆ ರವಿಗೌಡ, ಮಹದೇವ್, ಪರ್ವಿಜ್ ಅಹಮದ್, ಅಫ್ಜಲ್, ಗೋಮಧೇಶನ್, ರಾಲ್ಪರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net