ಕಣ್ಮಣಿಯಂತಿದ್ದಳು ‘ರುಕ್ಮಿಣಿ’

rukmini 1
Published on

ಚಾಮರಾಜನಗರ: ಯಾರ ಜಪ್ತಿಗೂ ಸಿಗದ ನವಿಲು ಮರಿಯನ್ನು ಹಿಡಿದು ಕೂರಿಸಿದಂತಿತ್ತು. ಅದಕ್ಕಾಗಿ ಮುದ್ದು ಮುಖದಲ್ಲಿ ದುಃಖ ಉಮ್ಮಳಿಸಿತ್ತು. ಎಳೆಯ ಕಂಗಳು ತುಂಬಿಬಂದಿತ್ತು. ಹೇಳಿಕೊಟ್ಟಿದ್ದನ್ನು ರಾಗವಾಗಿ ಪುನರುಚ್ಚರಿಸಿ ‘ಊಟ ಮಾಡ್ದ್ಯಾ ಮಾವ, ತಿಂಡಿ ಮಾಡ್ದ್ಯಾ ಮಾಮ ಅನ್ತೀನಿ’ ಎಂದಿತ್ತು.

ಇದು ಯಳಂದೂರು ತಾಲೂಕಿನ ಯರಿಯೂರಿನಲ್ಲಿ ಪ್ರಾಣಿಯ ಕ್ರೂರ ದಾಳಿಗೆ ಒಳಗಾಗಿ ಮೃತಪಟ್ಟ 3 ವರ್ಷದ ರುಕ್ಮಿಣಿಯ ಕೊನೆಯ ವಿಡಿಯೋ ದೃಶ್ಯಾವಳಿ.
ಗ್ರಾಮದ ಎಸ್.ಆನಂದ ಮತ್ತು ವಸಂತಿ ದಂಪತಿಯ ಪುತ್ರಿ ರುಕ್ಮಿಣಿ ಮೇಲೆ ಪ್ರಾಣಿ ದಾಳಿ ನಡೆದ (ಆ.14) ಹಿಂದಿನ ದಿನ ಮಾಡಿದ್ದ ಈ ವಿಡಿಯೋವನ್ನು ನೋಡಿದವರು, ‘ಇಷ್ಟು ಚೆಂದದ ಮಗು ಸತ್ತು ಹೋಯಿತಲ್ಲ’ ಎಂದು ಬೇಸರಗೊಳ್ಳುತ್ತಿದ್ದಾರೆ. ಚೂಟಿ ಬಾಲಕಿ ರುಕ್ಮಿಣಿಯನ್ನು ಅಂದು ಊರಿನ ಯುವಕನೊಬ್ಬ ತಮಾಷೆಗೆಂದು ಹಿಡಿದು ಕೂರಿಸಿದ್ದ. ಅವನು ಹೇಳಿಕೊಟ್ಟಂತೆಯೇ ರುಕ್ಮಿಣಿ ಮುಗ್ಧತೆಯಿಂದ ಹೇಳಿದ್ದ ಮಾತುಗಳು ಈ ವಿಡಿಯೋದಲ್ಲಿ ದಾಖಲಾಗಿವೆ. ಮರುದಿನ ರುಕ್ಮಿಣಿ ಮೇಲೆ ಪ್ರಾಣಿ ದಾಳಿ ನಡೆಯಿತು. ಮೈಸೂರಿನ ಆಸ್ಪತ್ರೆಯಲ್ಲಿ 10 ದಿನ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೆ (ಆ.24) ಉಸಿರು ಚೆಲ್ಲಿದಳು.

ಮಗಳ ಕೊರಗಿನಲ್ಲೇ ಕರಗಿ ಹೋಗುತ್ತಿರುವ ತಂದೆ ಎಸ್.ಆನಂದ, ತಾಯಿ ವಸಂತಿ ಮತ್ತು ಅಣ್ಣ ಪ್ರಶಾಂತ್ ಪಾಲಿಗೀಗ ಈ ಕೊನೆಯ ವಿಡಿಯೋ ಮತ್ತು ಆಕೆಯ ಫೋಟೋಗಳು ಬೆಲೆ ಕಟ್ಟಲಾಗದ ಸರಕು. ಸಾಮಾನ್ಯವಾಗಿ ತಂದೆ-ತಾಯಂದಿರೂ ಮಕ್ಕಳ ಚೆಂದದ ಫೋಟೋ, ವಿಡಿಯೋಗಳನ್ನು ಸಂಗ್ರಹಿಸಿಡುತ್ತಾರೆ. ಆದರೆ ರುಕ್ಮಿಣಿ ಪಾಲಕರು ಹೆತ್ತ ಮಗು ಕ್ರೂರವಾಗಿ ಮೃತಪಟ್ಟ ಫೋಟೋಗಳನ್ನೂ ಜೋಪಾನ ಮಾಡಿದ್ದಾರೆ. ಏಕೆಂದರೆ, ರುಕ್ಮಿಣಿ ಮೇಲೆ ಚಿರತೆ ದಾಳಿ ಮಾಡಿಲ್ಲವೆಂದು ಅರಣ್ಯ ಇಲಾಖೆ ಹೇಳಿದರೆ ದಾಳಿಯ ತೀವ್ರತೆ ತೋರಿಸಬೇಕಿದೆ. ಮನೆಯ ಸಮೀಪದಲ್ಲೇ ನಡೆದಿದ್ದ ಪ್ರಾಣಿ ದಾಳಿಯ ಸ್ಥಳ, ಈ ಸ್ಥಳದಲ್ಲಿ ಕೂದಲು ಸಹಿತ ಮೇಲೆದ್ದು ಬಂದಿದ್ದ ಚರ್ಮ ಬಿದ್ದಿತ್ತು. ಕತ್ತು, ಗಲ್ಲದ ಭಾಗದಲ್ಲಿ ಗಾಯಗಳಾಗಿತ್ತು. ಎಡಗೈ ಮುರಿದಿತ್ತು. ಇದೆಲ್ಲದರ ಫೋಟೋಗಳನ್ನು ಇಟ್ಟುಕೊಂಡಿದ್ದಾರೆ. ಮಗಳ ಶವವನ್ನು ಅರಣ್ಯ ಇಲಾಖೆ ಕಚೇರಿಯ ಮುಂದಿಟ್ಟು ಪ್ರತಿಭಟನೆ ನಡೆಸಿ ನ್ಯಾಯ ಕೇಳಬೇಕಾದ ಸ್ಥಿತಿ ಇದ್ದಾಗ ಇವೆಲ್ಲವೂ ಅವಶ್ಯಕ ಎಂದು ರುಕ್ಮಿಣಿ ಪಾಲಕರು ನಂಬಿದ್ದಾರೆ. ಅರಣ್ಯ ಇಲಾಖೆಯಿಂದ 5 ಲಕ್ಷ ರೂ. ಮತ್ತು ಶವಸಂಸ್ಕಾರಕ್ಕೆ 50 ಸಾವಿರ ರೂ. ಪರಿಹಾರ ನೀಡಲಾಗಿದೆ. ಶವಪರೀಕ್ಷೆ ವರದಿ ಬಂದ ಬಳಿಕ ಉಳಿಕೆ ಪರಿಹಾರದ ಹಣ ನೀಡುವ ಪ್ರಕ್ರಿಯೆ ನಡೆಯಲಿದೆ.

ಸುಶೀಲಾ ಬಳಿಕ ರುಕ್ಮಿಣಿ:
ಹನೂರು ತಾಲೂಕಿನ ಕಗ್ಗಲಿಗುಂದಿಯಲ್ಲಿ ಚಿರತೆ ದಾಳಿಯಿಂದ ಸುಶೀಲಾ(6) ಎಂಬ ಬಾಲಕಿ ಕಳೆದ ತಿಂಗಳು ಮೃತಪಟ್ಟಳು. ಮನೆಯ ಮುಂದೆ ಮೊಬೈಲ್‌ನಲ್ಲಿ ಆಟವಾಡುತ್ತಾ ಕುಳಿತಿದ್ದಾಗ ಚಿರತೆ ದಾಳಿ ಮಾಡಿ ಬಾಲಕಿಯನ್ನು ಹೊತ್ತೊಯ್ಯಲು ಪ್ರಯತ್ನಿಸಿತ್ತು. ಗ್ರಾಮಸ್ಥರ ಗದ್ದಲಕ್ಕೆ ಬೆದರಿದ್ದ ಚಿರತೆ ಸುಶೀಲಾಳನ್ನು ಬಿಟ್ಟು ಓಡಿಹೋಗಿತ್ತು. ನಂತರ ಮೈಸೂರಿನ ಆಸ್ಪತ್ರೆಯಲ್ಲಿ ಸುಶೀಲಾಗೆ ಚಿಕಿತ್ಸೆ ಕೊಡಿಸಲಾಯಿತಾದರೂ ಕೊನೆಗೆ ಬಾಲಕಿ ಬದುಕಲಿಲ್ಲ. ಇಂತಹದ್ದೇ ಪ್ರಕರಣ ಯಳಂದೂರಿನ ಯರಿಯೂರಿನಲ್ಲಿ ಮರುಕಳಿಸಿತು. 3 ವರ್ಷದ ರುಕ್ಮಿಣಿ ಪ್ರಾಣಿ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿ ಮೃತಪಟ್ಟಳು. ಯಳಂದೂರಿನ ಮಲ್ಲಿಗೆಹಳ್ಳಿಯ ಹರ್ಷ(8) ಎಂಬ ಬಾಲಕನ ಮೇಲೂ ಚಿರತೆ ದಾಳಿ ಮಾಡಿತ್ತು. ಅದೃಷ್ಟವಶಾತ್ ಹರ್ಷ ಬದುಕುಳಿದ ಎನ್ನುವುದೊಂದೇ ಸಮಾಧಾನದ ಸಂಗತಿ. ಆದರೆ ಮುಂದಿನ ದಿನಗಳಲ್ಲಿ ಮತ್ಯಾರ ಮೇಲೆ, ಎಲ್ಲಿ ವನ್ಯಜೀವಿ ದಾಳಿ ನಡೆಯುತ್ತದೆಯೋ ಎನ್ನುವ ಆತಂಕ ಮುಂದುವರಿದಿದೆ.

ಕೂಲಿಕಾರನ ದುಃಖ ಕೇಳೋರ‌್ಯಾರು?:
ಪ್ರಾಣಿ ದಾಳಿಯಿಂದ ಮೃತಪಟ್ಟ ರುಕ್ಮಿಣಿಯ ತಂದೆ ಎಸ್.ಆನಂದ ಎಳನೀರು ಕೀಳುವ ಕೂಲಿಕಾರ. ಮಗಳ ಸಾವಿನಿಂದ ದುಃಖದಲ್ಲಿದ್ದಾರೆ. ದುಡಿಯದೆ ಮನೆಯಲ್ಲಿ ಕೂರುವ ಸ್ಥಿತಿಯಲ್ಲಿ ಆನಂದ ಇಲ್ಲ. ಆದರೆ ಮಗಳ ಯೋಚನೆಯಲ್ಲಿ ಮರ ಹತ್ತುವ ಕೆಲಸ ಮಾಡಲಾಗದೆ ಅಸಹಾಯಕರಾಗಿದ್ದಾರೆ.
ಇವರ ಪರಿಸ್ಥಿತಿಯನ್ನು ವಿವರಿಸಿರುವ ಯರಿಯೂರಿನ ಸಮಾಜ ಸೇವಕ ಮಹದೇವಸ್ವಾಮಿ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ವನ್ಯಜೀವಿ ದಾಳಿಯಿಂದ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಉತ್ತಮ ಚಿಕಿತ್ಸೆ ಕೊಡಿಸಬೇಕು. ಇಂತಹ ಪ್ರಕರಣಗಳನ್ನು ಅರಣ್ಯ ಇಲಾಖೆ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಆನಂದನ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವುದರ ಜತೆಗೆ, ಬದುಕಿಗೆ ದಾರಿ ಮಾಡಿಕೊಡಿ ಎಂದು ಒತ್ತಾಯಿಸಿದ್ದಾರೆ.

ನನ್ನ ಮಗಳು ರುಕ್ಮಿಣಿಗೆ ಆದ ಸ್ಥಿತಿ ಬೇರೆ ಮಕ್ಕಳಿಗೆ ಆಗಬಾರದು. ಅವಳ ಸಾವು ನಮ್ಮನ್ನು ಕಂಗೆಡಿಸಿಬಿಟ್ಟಿದೆ. ಮನುಷ್ಯರ ಮೇಲೆ ವನ್ಯಜೀವಿ ದಾಳಿಗಳನ್ನು ತಪ್ಪಿಸಲು ಅರಣ್ಯ ಇಲಾಖೆ ಮುಂದಾಗಬೇಕು.ಎಸ್.ಆನಂದ, ರುಕ್ಮಿಣಿ ತಂದೆ, ಯರಿಯೂರು ಮೃತ ಬಾಲಕಿಯ ಶವಪರೀಕ್ಷೆ ವರದಿ ಇನ್ನೂ ಬಂದಿಲ್ಲ. ವರದಿ ಕೈ ಸೇರಿದ ಬಳಿಕ ಅದನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು.ಲೋಕೇಶ್‌ಮೂರ್ತಿ, ಆರ್‌ಎ್ಒ, ಬಿಆರ್‌ಟಿ, ಯಳಂದೂರು ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net