

ಚಾಮರಾಜನಗರ: ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಗಳಿಗೆ ಮತಾಂತರಗೊಂಡಿರುವ ಪರಿಶಿಷ್ಟ ಜಾತಿ ಸಮುದಾಯದವರಿಗೆ ಮೀಸಲಾತಿ ವಿಸ್ತರಣೆ ಕುರಿತು ಆ.30ರಂದು ಮುಕ್ತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಗತಿಪರ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ ತಿಳಿಸಿದರು.
ಪರಿಶಿಷ್ಟ ಜಾತಿ ಮೀಸಲಾತಿ ಸಂರಕ್ಷಣಾ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10.30ಕ್ಕೆ ಸಂವಾದ ಪ್ರಾರಂಭವಾಗಲಿದೆ. ಮತಾಂತರಗೊಂಡಿರುವ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಮೀಸಲಾತಿ ಬೇಕೆ? ಬೇಡವೆ? ವಿಷಯ ಕುರಿತು ಮುಕ್ತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಂವಾದದಲ್ಲಿ ಭಾಗವಹಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ದೇಶದಲ್ಲಿ ಸುಮಾರು 5 ಶತಮಾನಗಳಿಂದಲೂ ಕ್ರೈಸ್ತ ಹಾಗೂ ಮುಸ್ಲಿಂ ಧರ್ಮಗಳಿಗೆ ಪರಿಶಿಷ್ಟ ಸಮುದಾಯಗಳ ಜನರು ಮತಾಂತರವಾಗುತ್ತಲೇ ಇದ್ದಾರೆ. ಇಂದಿಗೂ ಅದು ಮುಂದುವರಿಯುತ್ತಲೇ ಬಂದಿದೆ. ಅನ್ಯಧರ್ಮಗಳಿಗೆ ಮತಾಂತರವಾಗಿರುವ ಪರಿಶಿಷ್ಟ ಜಾತಿಯ ಜನರು, ಪರಿಶಿಷ್ಟರಿಗೆ ಮೀಸಲಾದ ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ತಮ್ಮ ದಾಖಲಾತಿಗಳಲ್ಲಿ ಹಿಂದು ಧರ್ಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವಾಗಿಯೇ ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಯೋಜಕ ರಾಜಣ್ಣ, ಬಿವಿಎಫ್ ಜಿಲ್ಲಾ ಸಂಯೋಜಕ ರವಿಮೌರ್ಯ, ದಡದಹಳ್ಳಿ ಶಂಕರ್, ನಲ್ಲೂರು ಪರಮೇಶ್ವರ್, ಕೃಷ್ಣಮೂರ್ತಿ ಹಾಗೂ ಶ್ರೀನಿವಾಸ್ ಹಾಜರಿದ್ದರು.