

ಚಾಮರಾಜನಗರ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಕೃಷಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮುಂಗಾರು ಹಂಗಾಮಿನಲ್ಲಿ ಚಾಮರಾಜನಗರ ತಾಲೂಕಿನಲ್ಲಿ 9,488 ಹೆಕ್ಟೇರ್, ಗುಂಡ್ಲುಪೇಟೆ ತಾಲೂಕಿನಲ್ಲಿ 30,419 ಹೆಕ್ಟೇರ್, ಕೊಳ್ಳೇಗಾಲ ತಾಲೂಕಿನಲ್ಲಿ 4,833 ಹೆಕ್ಟೇರ್, ಹನೂರು ತಾಲೂಕಿನಲ್ಲಿ 14,546 ಹೆಕ್ಟೇರ್, ಯಳಂದೂರು ತಾಲೂಕಿನ 5,710 ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳು ಬಿತ್ತನೆಯಾಗಿವೆ. ಆದರೆ ಮಳೆ ಕೊರತೆಯಿಂದ ಚಾಮರಾಜನಗರ ತಾಲೂಕಿನಲ್ಲಿ 9.76 ಹೆಕ್ಟೇರ್ ಮುಸುಕಿನ ಜೋಳ, ಕೊಳ್ಳೇಗಾಲ ತಾಲೂಕಿನಲ್ಲಿ 21.2 ಹೆಕ್ಟೇರ್ ಮುಸುಕಿನ ಜೋಳ, ಹನೂರು ತಾಲೂಕಿನಲ್ಲಿ 1.2 ಹೆಕ್ಟೇರ್‌ನಲ್ಲಿ ಸಜ್ಜೆ ಹಾಗೂ 43.32 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಮುಸುಕಿನ ಜೋಳ ಹಾನಿಯಾಗಿದೆ.
ಜಿಲ್ಲೆಯಲ್ಲಿ 375.5 ಮಿ.ಮೀ ವಾಡಿಕೆ ಮಳೆ ಪೈಕಿ 353.8 ಮಿ.ಮೀ ಮಳೆಯಾಗಿದೆ. ಕೃಷಿ ಇಲಾಖೆ ನೀಡಿರುವ ಈ ಮಾಹಿತಿ ಹೊರತುಪಡಿಸಿಯೂ ಹಲವು ಕಡೆಗಳಲ್ಲಿ ವಿವಿಧ ಬೆಳೆಗಳು ಮಳೆ ಕೊರತೆ, ನೀರಿನ ಅಭಾವ, ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ಒಣಗಿಹೋಗಿವೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರವನ್ನು ಬರಪೀಡಿತ ಜಿಲ್ಲೆ ಎಂದು ೋಷಣೆ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಈ ಕುರಿತು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಸೂಕ್ತ ಪರಿಹಾರ ಘೋಷಿಸಿ
ಜಿಲ್ಲೆಯಲ್ಲಿ ಹಿಂಗಾರು ಮತ್ತು ಮುಂಗಾರು ಮಳೆ ವಿಲವಾಗಿದ್ದು, ಕೆರೆ-ಕಟ್ಟೆ, ನಾಲೆಗಳಲ್ಲಿ ನೀರಿಲ್ಲ. ಅಂತರ್ಜಲ ಮಟ್ಟವೂ ಕುಸಿದಿದೆ. ನೀರು ದೊರೆಯುವ ಭರವಸೆ ಮೇಲೆ ರೈತರು ಕೃಷಿಯಲ್ಲಿ ತೊಡಗಿದ್ದರು. ಒಣ ಭೂಮಿ ಬೇಸಾಯ ಮಾಡುತ್ತಿರುವವರು ಮುಂಗಾರು ಮಳೆಯನ್ನು ನಂಬಿಕೊಂಡು ಬಿತ್ತನೆ ಮಾಡಿದ್ದರು. ಆದರೀಗ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಹಾಗಾಗಿ ಅಚ್ಚುಕಟ್ಟು ಭಾಗದ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ. ಪರಿಹಾರ ೋಷಣೆ ಮಾಡಬೇಕು. ಒಣ ಬೇಸಾಯ ಮಾಡುತ್ತಿರುವವರಿಗೆ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ. ನೀಡಬೇಕು. ಚಾಮರಾಜನಗರ ಜಿಲ್ಲೆಯನ್ನು ಬರಪೀಡಿತ ಎಂದು ೋಷಿಸಬೇಕು.
ಹಳ್ಳಿಕೆರೆಹುಂಡಿ ಭಾಗ್ಯರಾಜ್,
ಕಾರ್ಯಾಧ್ಯಕ್ಷ, ರಾಜ್ಯ ಕಬ್ಬುಬೆಳೆಗಾರರ ಸಂಘ, ಚಾಮರಾಜನಗರ
ಶಾಶ್ವತ ನೀರಾವರಿ ಯೋಜನೆ ರೂಪಿಸಿ
ಮಳೆ ಇಲ್ಲ. ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಬೆಳೆಗಳು ಒಣಗುತ್ತಿವೆ. ಕೈಗೆ ಬಂದ ಸಲು ಕೂಡ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು. ರೈತರಿಗೆ ಉಂಟಾಗಿರುವ ಬೆಳೆ ನಷ್ಟವನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಕೊಡಬೇಕು. ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ತರಬೇಕು. ಸಕಾಲದಲ್ಲಿ ಮಳೆಯಾಗಲು ಅರಣ್ಯ ಸಂರಕ್ಷಣೆ, ಮಳೆ ನೀರು ಇಂಗಿಸುವ ವಿಧಾನ ಅಳವಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಬೇಕು.
ಮಹೇಶ್‌ಪ್ರಭು,
ಉಪಾಧ್ಯಕ್ಷ, ರಾಜ್ಯ ರೈತ ಸಂಘ, ಚಾಮರಾಜನಗರ
ರಾಜಕೀಯ ಮಾಡದೆ ನೀರು ಬಿಡಿ
ಕಬಿನಿ ಜಲಾಶಯ ತುಂಬಿಕೊಂಡರೂ ಸರ್ಕಾರ ಕೆರೆ-ಕಟ್ಟೆ ಮತ್ತು ನಾಲೆಗಳಿಗೆ ನೀರು ಬಿಡದೆ ತಮಿಳುನಾಡಿಗೆ ಹರಿಸಿದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ವಿದ್ಯುತ್ ಪದೇ ಪದೆ ಕಣ್ಣಾಮುಚ್ಚಾಲೆಯಾಡುತ್ತಿದೆ. ರಾತ್ರಿ ವೇಳೆ ಕರೆಂಟ್ ಇರುವುದೇ ಇಲ್ಲ. ಮುಂದಿನ ದಿನಗಳಲ್ಲಿ ಜನರಿಗೆ ಆಹಾರ ಸಿಗುವುದಿರಲಿ, ದನಗಳಿಗೆ ಮೇವು ಸಹ ಸಿಗುವುದಿಲ್ಲ. ರಾಜ್ಯ ಸರ್ಕಾರ ನೀರಿನ ವಿಚಾರದಲ್ಲಿ ರಾಜಕೀಯ ಮಾಡದೆ ಜಲಾಶಯದಲ್ಲಿ ಇರುವಷ್ಟು ನೀರನ್ನು ಕೆರೆ-ಕಟ್ಟೆ ಮತ್ತು ನಾಲೆಗಳಿಗೆ ಬಿಡಬೇಕು.
ಹೊನ್ನೂರು ಪ್ರಕಾಶ್, ಜಿಲ್ಲಾಧ್ಯಕ್ಷ, ರೈತ ಸಂಘ, ಚಾಮರಾಜನಗರ
ದನಕರುಗಳಿಗೆ ಮೇವು ಇಲ್ಲ
ಮಳೆ ಬರುತ್ತದೆ ಎನ್ನುವ ನಂಬಿಕೆ ಮೇಲೆ ರಾಜ್ಯ ಸರ್ಕಾರ ಬರ ೋಷಣೆ ಮಾಡದೆ ಮುಂದೂಡುತ್ತಲೇ ಇದೆ. ಮಳೆ ಇಲ್ಲದೆ ಬೆಳೆಗಳು ಒಣಗುತ್ತಿರುವುದು ಸರ್ಕಾರಕ್ಕೆ ಗೊತ್ತಿದೆ. ಆದರೂ ಬಿತ್ತನೆ ಬೀಜ ವಿತರಣೆ ಮಾಡುತ್ತಿದೆ. ತಮಿಳುನಾಡಿಗೆ ನೀರು ಕೊಡುವುದು ಮಾತ್ರವಲ್ಲ, ನಮ್ಮ ಪಾಲನ್ನೂ ಕೊಡಬೇಕಿದೆ. ದನಕರುಗಳಿಗೆ ಮೇವು ಇಲ್ಲದಂತಾಗಿದೆ. ಗೋಶಾಲೆಗಳನ್ನು ತೆರೆದಿಲ್ಲ. ಉಚಿತವೆಂದು ಹೇಳಿ 7 ಗಂಟೆ ಕೊಡುತ್ತಿದ್ದ ವಿದ್ಯುತ್ ಅನ್ನು 2 ಗಂಟೆಗೆ ತಂದು ನಿಲ್ಲಿಸಲಾಗಿದೆ.
ಅಣಗಳ್ಳಿ ಬಸವರಾಜು
ರೈತ ಹೋರಾಟಗಾರ, ಕೊಳ್ಳೇಗಾಲ
ಪಂಪ್‌ಸೆಟ್‌ಗಳಿಗೆ ಕರೆಂಟ್ ಇಲ್ಲ
ಹನೂರು ಭಾಗದಲ್ಲಿ ಹೆಚ್ಚಿನ ರೈತರು ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ಈ ಬಾರಿ ಮಳೆ ಕೈಕೊಟ್ಟಿದೆ. ಇತ್ತ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ. ಪರಿಣಾಮ, ಕೆಲವು ಜಮೀನುಗಳಲ್ಲಿ ಬೆಳೆಗಳು ಒಣಗುತ್ತಿವೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಹಾನಿಯಾದ ಬೆಳೆಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು.
ಕನಕಮ್ಮ
ಉಪಾಧ್ಯಕ್ಷೆ, ರೈತ ಸಂಘ, ಹನೂರು
ಅಂತರ್ಜಲ ಕುಸಿತ
ಮಳೆಯಾಗದ ಪರಿಣಾಮ ಹನೂರು ಭಾಗದಲ್ಲಿ ಅಂತರ್ಜಲ ಕುಸಿದಿದೆ. ಇದರಿಂದ ಕೃಷಿಗೆ ಹಿನ್ನಡೆಯಾಗಿದ್ದು, ರೈತರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಜಮೀನಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿವೆ. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕಿದೆ.
ಪೂಂಗುಡಿ, ಕಾರ್ಯದರ್ಶಿ, ರೈತ ಸಂಘ, ಹನೂರು
ಕ್ರಮವಹಿಸದ ಸರ್ಕಾರ
ಮಳೆ ಇಲ್ಲದೆ ಬರ ಕಾಡುತ್ತಿದ್ದರೂ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ಬೆಂಬಲ ಬೆಲೆ ನೀಡಿ ಸೂರ್ಯಕಾಂತಿ ಖರೀದಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದರೂ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಅನುಷ್ಠಾನಕ್ಕೆ ಆಸಕ್ತಿ ತೋರುತ್ತಿರುವಂತೆಯೇ ರೈತರ ಕಷ್ಟಗಳನ್ನು ಸಹ ನಿವಾರಿಸಬೇಕು.
ಮಂಗಳಗೌರಿ, ರೈತ ಮಹಿಳೆ, ಕುಂದಕೆರೆ, ಗುಂಡ್ಲುಪೇಟೆ
ಅಧಿಕಾರಿಗಳಿಂದ ಜಂಟಿ ಸರ್ವೇ
ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಬರಪೀಡಿತ ಪ್ರದೇಶಗಳ ಜಂಟಿ ಸರ್ವೇ ಮಾಡಬೇಕು. ಇದಕ್ಕಾಗಿ 10 ದಿನಗಳವರೆಗೆ ಕಾಲಾವಕಾಶ ನೀಡಲಾಗಿದೆ. ನಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.
ಆಬೀದ್, ಜಂಟಿ ಕೃಷಿ ನಿರ್ದೇಶಕ, ಚಾಮರಾಜನಗರ