ಸಮಾಜಮುಖಿಯಾದರೆ ಯಶಸ್ಸು ಸಾಧ್ಯ

27chn6
Published on

ಚಾಮರಾಜನಗರ: ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಾಗ ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬಹುದು ಎಂದು ವೆಂಕಟಯ್ಯನಛತ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ನಾಗೇಶ್ ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ನನ್ನ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು, ಜೆಎಸ್‌ಎಸ್ ಸಂಸ್ಥೆ ಮತ್ತು ವಿದ್ಯೆ ನೀಡಿದ ಗುರುಗಳು ಕಾರಣ. ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಇಲ್ಲಿಯೇ ಉಪನ್ಯಾಸಕನಾಗಿ ಕರ್ತವ್ಯ ಸಲ್ಲಿಸಿ, ಈಗ ಸರ್ಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿದ್ದೇನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡುವ ಮೂಲಕ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಕುದೇರು ಸರ್ಕಾರಿ ಎಂ.ಸಂಗಶೆಟ್ಟಿ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಕೆ.ಎನ್.ಅಶ್ವಿನಿ ಮಾತನಾಡಿ, ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆಯಿದ್ದು, ಅದೃಷ್ಟ, ದೇವರು ಎಂದು ಕುಳಿತರೆ ನಾವು ಏನನ್ನೂ ಸಾಧಿಸಲು ಆಗುವುದಿಲ್ಲ. ನಾವು ಅಂದುಕೊಂಡಿದ್ದ ಗುರಿಯನ್ನು ಸಾಧಿಸಲು ಸತತ ಪರಿಶ್ರಮ ಪಡಬೇಕು. ತಮ್ಮ ಪಾಲಿನ ಬದುಕು ಸುಖ ಅಥವಾ ದುಖದೊಂದಿಗೆ ಕೂಡಿರಲಿ, ಅದನ್ನು ಮುಕ್ತಮನಸ್ಸಿನಿಂದ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು. ಪ್ರಾಂಶುಪಾಲ ಜಿ.ಸಿದ್ದರಾಜು, ಬೆಂಗಳೂರು ಆಕಾಶವಾಣಿ ಕಲಾವಿದೆ ಮಂಜುಳಾಪ್ರಭಾಕರ್, ಜೆಎಸ್‌ಎಸ್ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಐಕ್ಯುಎಸಿ ಸಂಚಾಲಕಿ ಬಿ.ರೇವಣಾಂಬ, ಸಹಾಯಕ ಪ್ರಾಧ್ಯಾಪಕ ಆರ್.ಪಿ.ಅನುರಾಧಾ, ಎಸ್.ಜಮುನಾ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಸಿ.ರೂಪಶ್ರೀ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net