

ಚಾಮರಾಜನಗರ :ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಮೂಲಸೌಕರ್ಯ ಕಲ್ಪಿಸುವಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.
ತಾಲೂಕಿನ ಬದನಗುಪ್ಪೆ ಸರ್ಕಾರಿ ಪ್ರೌಢಶಾಲೆಗೆ ಶನಿವಾರ ಭೇಟಿ ನೀಡಿದ ಅವರು, ಅಲ್ಲಿನ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಶಾಲಾ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿಗಳ ಕಲಿಕೆ ಹಾಗೂ ಮೂಲಸೌಲಭ್ಯಗಳ ಕುರಿತು ಸಮಾಲೋಚಿಸಿದರು. ಸರ್ಕಾರಿ ಶಾಲೆಗಳಲ್ಲಿ ಕಂಡುಬರುವ ಕೊಠಡಿ, ಕಲಿಕಾ ಪೀಠೋಪಕರಣಗಳ ಕೊರತೆ ಹಾಗೂ ಮೂಲಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗುವುದು. ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಮಸ್ಯೆಗಳಾದ ಎನ್‌ಪಿಎಸ್ ರದ್ದು ಮಾಡಿ ಒಪಿಎಸ್ ಜಾರಿಗೊಳಿಸುವುದು, ಬಡ್ತಿ ಶಿಕ್ಷಕರಿಗೆ ಹೆಚ್ಚುವರಿ ಸಂಬಳ ನೀಡಿಕೆ, ಹಿಂದಿ ಶಿಕ್ಷಕರ ನೇಮಕ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಇಲಾಖೆಯ ಸುತ್ತೋಲೆಗಳಲ್ಲಿರುವ ಗೊಂದಲವನ್ನು ಪರಿಹರಿಸಲಾಗುವುದು ಎಂದರು.
ಬದನಗುಪ್ಪೆ ಸರ್ಕಾರಿ ಪ್ರೌಢಶಾಲೆ ಉತ್ತಮ ವಾತಾವರಣದಲ್ಲಿದೆ. ಗ್ರಾಮೀಣ ಪ್ರದೇಶ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಉತ್ತಮ ಗುಣಮಟ್ಟದ ಶಿಕ್ಷಣದಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಈ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕರನ್ನು 190ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗೆ ನೀಡಲಾಗುತ್ತಿತ್ತು. ಈ ನಿಯಮವನ್ನು ಬದಲಾವಣೆ ಮಾಡಿ, ಅವೈಜ್ಞಾನಿಕವಾಗಿ 490 ವಿದ್ಯಾರ್ಥಿಗಳಿಗೆ ಒಬ್ಬರು ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜನೆ ಮಾಡಲು ಮುಂದಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವುದು ಕಷ್ಟ. ಹೀಗಾಗಿ ಹಿಂದಿನ ನಿಯಮವನ್ನು ಪಾಲನೆ ಮಾಡಿ, ಪ್ರೌಢಶಾಲೆಗೊಂದು ದೈಹಿಕ ಶಿಕ್ಷಣ ಶಿಕ್ಷಕರ ನೇಮಕವಾಗಬೇಕು. ವಿಷಯವಾರು ಶಿಕ್ಷಕರು ಇಲ್ಲದ ಕಡೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿ, ಮಕ್ಕಳಿಗೆ ಪಾಠ ಪ್ರವಚನಗಳನ್ನು ಮಾಡುವಂತಾಗಬೇಕು ಎಂದರು.
ಶಾಲೆಯ ಮುಖ್ಯ ಶಿಕ್ಷಕ ನಂಜುಂಡಸ್ವಾಮಿ, ಸಹ ಶಿಕ್ಷಕ ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್.ಗಜೇಂದ್ರ, ಮಾದೇಶ್, ನಾಗಣ್ಣ, ಶೋಭಾ, ಮೇರಿ ಸಾಲಿನಾ ಸಿಂಧು, ಡಾ.ಶಂಕರೇಗೌಡ, ಷಡಕ್ಷರಿ ಹಾಜರಿದ್ದರು.