ಮುದಾಯದ ಒಗ್ಗಟ್ಟಿನಿಂದ ಅಭಿವೃದ್ಧಿ ಸಾಧ್ಯ

27chn1
Published on

ಚಾಮರಾಜನಗರ: ವಾಲ್ಮೀಕಿ ಸಮುದಾಯದ ಯುವಜನರು ಉನ್ನತ ಶಿಕ್ಷಣ ಪಡೆದುಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು ಸಲಹೆ ನೀಡಿದರು.

ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಲಕ್ಷ್ಮೀದೇವಿ ದೇವಸ್ಥಾನ, ನಾಯಕ ಸಮುದಾಯ ಭವನ, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘದ ನಾಮಫಲಕ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಯಕ ಸಮುದಾಯದ ಇತಿಹಾಸವನ್ನು ನೋಡಿದರೆ ಅನೇಕ ಮಹಾಪುರುಷರು ನಾಡಿನ ಏಳಿಗೆಗಾಗಿ ದುಡಿದಿದ್ದಾರೆ. ಶ್ರೀ ಮಹರ್ಷಿ ವಾಲ್ಮೀಕಿ ರಾಮಾಯಣ ರಚಿಸುವ ಮೂಲಕ ವಿಶ್ವಮಾನ್ಯರಾಗಿದ್ದಾರೆ. ರಾಮನ ಇಬ್ಬರು ಮಕ್ಕಳಿಗೆ ವಿದ್ಯೆಯನ್ನು ಕಲಿಸುವ ಮೂಲಕ ಶಿಕ್ಷಣದ ಮಹತ್ವ ತಿಳಿಸಿದರು. ಇಂದಿಗೂ ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದಕ್ಕೆ ಅನೇಕ ಮಹಾಪುರುಷರ ಮಾನವೀಯತೆಯ ನಡೆ ಕಾರಣವಾಗಿದೆ ಎಂದು ತಿಳಿಸಿದರು.

ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲಾಗಿದೆ. ಹಿಂದೆ ಕೆಲವೇ ಜನರು ನಮ್ಮ ಸಮುದಾಯದಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿದ್ದರು. ಈಗ ಸಂವಿಧಾನ ನೀಡಿದ ಹಲವು ಅವಕಾಶಗಳಿಂದ ಅನೇಕರು ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರಗಳು ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಉತ್ತೇಜನ ನೀಡುತ್ತಿವೆ. ಈ ಅವಕಾಶಗಳನ್ನು ಬಳಸಿಕೊಂಡು ಸಮುದಾಯದ ಯುವಕರು ದೊಡ್ಡ ಹುದ್ದೆಗಳನ್ನು ಪಡೆದುಕೊಳ್ಳಬಹುದು ಎಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ನಾನು ಸತತ 4ನೇ ಬಾರಿಗೆ ಆಯ್ಕೆಯಾಗಲು ನಾಯಕ ಸಮುದಾಯದ ಜನರ ಪಾತ್ರವೂ ಸಾಕಷ್ಟಿದೆ. ಹಾಗಾಗಿ ಸಮುದಾಯದ ಅಭಿವೃದ್ಧಿಗೆ ನನ್ನ ಅಧಿಕಾರದ ಅವಧಿಯಲ್ಲಿ ಶ್ರಮವಹಿಸಿದ್ದೇನೆ. ಸಮುದಾಯ ಭವನ, ಮನೆಗಳ ನಿರ್ಮಾಣ, ಗಂಗಾಕಲ್ಯಾಣ ಇನ್ನಿತರ ಯೋಜನೆಗಳಲ್ಲಿ ಸಮುದಾಯಕ್ಕೆ ಮೀಸಲಾದ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿದ್ದೇನೆ. ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ಸಾಲ ಸೌಲಭ್ಯಗಳನ್ನು ಒದಗಿಸಲು ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ ಎಂದರು.

ಬಿಸಲವಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಹೆಚ್ಚಿನ ಮತ ನೀಡಿದ್ದೀರಿ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಯಕ ಸಮುದಾಯ ಹೆಚ್ಚಾಗಿರುವ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದೇನೆ. ರಾಮಾಯಣ ಮಹಾಗ್ರಂಥವನ್ನು ಬರೆದಿರುವ ವಾಲ್ಮೀಕಿ ಮಹಾಕವಿಯ ತತ್ವ ಆದರ್ಶ ನಮಗೆ ಮಾದರಿ ಆಗಬೇಕು. ಸಮುದಾಯದ ಮಹಾಪುರುಷರ ಹಾದಿಯಲ್ಲಿ ಸಾಗಿದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮೈಸೂರು-ಚಾಮರಾಜನಗರ ಎಸ್ಸಿ, ಎಸ್ಟಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವ ನಾಯಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರಕಲವಾಡಿ ಸೋಮನಾಯಕ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಮುಖಂಡ ಸೋಮಲಿಂಗಪ್ಪ, ಗ್ರಾ.ಪಂ ಅಧ್ಯಕ್ಷೆ ಸೌಮ್ಯ, ಸದಸ್ಯರಾದ ಜಿ.ಮಹದೇವಪ್ಪ, ಎಂ.ಕುಮಾರ್, ಬಾಲರಾಜ್, ಮಣಿ, ಸಿದ್ದರಾಜು, ನಾಗರತ್ನಮ್ಮ, ಮುಖಂಡ ಗಿರೀಶ್, ಪಟೇಲ್ ರಾಜಪ್ಪ, ಶಿವಬಸಪ್ಪ, ಕುಮಾರ್, ಮಂಜೇಶ್ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net