

ಕೊಳ್ಳೇಗಾಲ: ಕೆಎಸ್‌ಆರ್‌ಪಿ ಮುಖ್ಯಪೇದೆಯೊಬ್ಬರು ಪಟ್ಟಣದಲ್ಲಿ ಹೃದಯಾಘಾತದಿಂದ ಶುಕ್ರವಾರ ನಿಧನರಾದರು.
ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಕಕ್ಕೆಬ್ಬೆ ಗ್ರಾಮದ ಕೆ.ಎನ್.ಮೋಹನ್(44) ಮೃತಪಟ್ಟವರು. ಇವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
ಕೆಎಸ್‌ಆರ್‌ಪಿ ಮೈಸೂರಿನ 6ನೇ ಬೆಟಾಲಿಯನ್ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎನ್.ಮೋಹನ್ ಅವರು, ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು.
ಅಣೆಕಟ್ಟೆಯಿಂದ ಕಾವೇರಿ ನದಿಗೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಗೆ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಗುರುವಾರ ಯಳಂದೂರಿನಲ್ಲಿ ಬಾಲಕಿ ರುಕ್ಮಿಣಿ ಸಾವು ಪ್ರಕರಣದ ಪ್ರತಿಭಟನೆಯಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದ್ದರು. ನಂತರ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಪಕ್ಕದ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ ಹೂಡಿದ್ದರು. ಇವರೊಂದಿಗೆ 23 ಜನರ ಕೆಎಸ್‌ಆರ್‌ಪಿ ತಂಡ ಅಲ್ಲೇ ಉಳಿದಿತ್ತು. ರಾತ್ರಿ ಊಟ ಮಾಡಿ ಎಲ್ಲ ಸಿಬ್ಬಂದಿ ಮಲಗಿದ್ದರು.
ಈ ವೇಳೆ ಕೆ.ಎನ್.ಮೋಹನ್ ತಮ್ಮ ಕುಟುಂಬದವರಿಗೆ ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಶುಕ್ರವಾರ ಬೆಳಗ್ಗೆ ನಿತ್ಯದ ರೋಲ್‌ಕಾಲ್‌ಗೆ ಬಾರದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಕೊಠಡಿಗೆ ತೆರಳಿ ನೋಡಿದಾಗ ಮೋಹನ್ ಹಾಸಿಗೆಯಿಂದ ಎದ್ದಿರಲಿಲ್ಲ. ತಕ್ಷಣವೇ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಹೃದಯಘಾತದಿಂದ ನಿಧನರಾದರು ಎನ್ನಲಾಗಿದೆ. ನಂತರ ಶವಾಗಾರಕ್ಕೆ ಮೃತದೇಹವನ್ನು ಸಾಗಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಡಿವೈಎಸ್ಪಿ ಸೋಮೇಗೌಡ, ವೃತ್ತ ನಿರೀಕ್ಷಕ ಕೃಷ್ಣಪ್ಪ, ಮೈಸೂರಿನ ಕೆಎಸ್‌ಆರ್‌ಪಿ ಡಿವೈಎಸ್ಪಿ ರಾಜು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಈ ವೇಳೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಮೃತದೇಹವನ್ನು ಒಪ್ಪಿಸಲಾಯಿತು.