

ಚಾಮರಾಜನಗರ : ಹೆಜ್ಜೆಯ ಮೇಲೊಂದು ಹೆಜ್ಜೆ ಹಾಕುತ, ಗೆಜ್ಜೆ ಕಾಲ್ಗಳ ಧ್ವನಿಯ ಕೇಳುತ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಎಂದು ಎಲ್ಲರ ಮನೆಯಲ್ಲೂ ಲಕ್ಷ್ಮೀಯನ್ನು ಮನೆ ತುಂಬಿಕೊಳ್ಳುವ ಶ್ರಾವಣ ಮಾಸದ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ನಗರದ ವಿವಿಧ ಪ್ರಮುಖ ಬಡಾವಣೆಗಳ ಮನೆಮನೆಗಳಲ್ಲಿ ಹೆಣ್ಣು ಮಕ್ಕಳು ಶುಕ್ರವಾರ ವರಮಹಾಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ, ಹೊಸ ಸೀರೆ, ಆಭರಣ ತೊಡಿಸಿ, ವಿವಿಧ ಹೂಗಳಿಂದ ಸಿಂಗರಿಸಿ ದೇವಿಗೆ ವಿಶೇಷ ಪೂಜೆ ನರವೇರಿಸಿದರು. ಮುಂಜಾನೆಯಿಂದಲೇ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತೋರಣ ಕಟ್ಟಲಾಗಿತ್ತು. ಪೂಜಾ ಸ್ಥಳದಲ್ಲಿ ರಂಗೋಲಿ ಹಾಕಿ, ಬಾಳೆಕಂಬ, ಮಾವಿನ ಎಲೆಗಳಿಂದ ಸಿಂಗರಿಸಲಾಗಿತ್ತು. ಹೊಸ ಸೀರೆ, ಆಭರಣ ತೊಟ್ಟ ಹೆಣ್ಣು ಮಕ್ಕಳು ಲಕ್ಷ್ಮೀ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿದ್ದರು.
ಕೆಲವರು ಕಳಶದ ಮೇಲೆ ವಿವಿಧ ಲೋಹಗಳಿಂದ ಮಾಡಿದ ಲಕ್ಷ್ಮೀ ದೇವಿಯ ಮುಖ ವಿಗ್ರಹವನ್ನಿಟ್ಟು ಪೂಜಿಸಿದರೆ, ಹಲವರು ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು, ಕಣ್ಣು, ಕಿವಿ ಮಾಡಿ, ಒಡವೆ ಹಾಗೂ ಸೀರೆಯನ್ನು ತೊಡಿಸಿ ಅಲಂಕರಿಸಿದ್ದರು. ಹಲವರು ಮಾರುಕಟ್ಟೆಯಲ್ಲಿ ದೊರೆಯುವ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಅಲಂಕೃತ ಮೂರ್ತಿಯ ಮುಂದೆ ಬಗೆಬಗೆಯ ಹಣ್ಣು, ತಿಂಡಿ, ತಿನಿಸು, ಬಾಗಿನ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.
ಪೂಜೆಯ ಸಮಯದಲ್ಲಿ ಹೆಣ್ಣು ಮಕ್ಕಳು ದೇವಿಯ ಮೂರ್ತಿಯ ಜತೆಗೆ ಹಾಗೂ ಪೂಜಾ ಸಂಭ್ರಮವನ್ನು ತಮ್ಮ ಮೊಬೈಲ್ ೆನ್‌ಗಳಲ್ಲಿ ಚಿತ್ರೀಕರಿಸಿ ಪೋಟೋ ತೆಗೆದುಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ಸಾಕಷ್ಟು ಮನೆಗಳಲ್ಲಿ ವಿಜೃಂಭಣೆಯಿಂದ ಪೂಜೆ ನೆರವೇರಿಸಿ ನೆರೆಹೊರೆಯ ಪರಿಚಿತರನ್ನು ಪೂಜೆಗೆ ಆಹ್ವಾನಿಸಿದರು.
ವ್ಯಾಪಾರ ಜೋರು:
ಶ್ರಾವಣ ಮಾಸದಲ್ಲಿ ನಡೆಯುವ ವರಮಹಾಲಕ್ಷ್ಮೀ ಹಬ್ಬದ ದಿನವೂ ವ್ಯಾಪಾರ ವಹಿವಾಟು ಭರ್ಜರಿಯಾಗಿಯೇ ನಡೆಯಿತು. ನಗರದ ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಮಾರಿಗುಡಿ ಮುಂಭಾಗ, ಹಳೆ ಮಾರುಕಟ್ಟೆ ಹಾಗೂ ಇನ್ನಿತರ ರಸ್ತೆಗಳಲ್ಲಿ ಸಾರ್ವಜನಿಕರು ಹೂ, ಹಣ್ಣು, ಬಾಳೆಕಂದು ಖರೀದಿಸುವ ದೃಶ್ಯ ಸಮಾನ್ಯವಾಗಿತ್ತು. ಮಧ್ಯಾಹ್ನದ ವೇಳೆಗಾಗಲೇ ವ್ಯಾಪಾರ ಕಡಿಮೆಯಾಯಿತು. ಪ್ರಮುಖ ರಸ್ತೆಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಇದರಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರ ದಟ್ಟಣೆ ಇಲ್ಲದೇ ಖಾಲಿ ಹೊಡೆಯುತ್ತಿತ್ತು.
ಗ್ರಾಮಗಳಲ್ಲೂ ಕಳೆಗಟ್ಟಿದ ಹಬ್ಬ:
ತಾಲೂಕಿನ ಚಂದಕವಾಡಿ, ನಾಗವಳ್ಳಿ, ನಲ್ಲೂರು, ಜ್ಯೋತಿಗೌಡನಪುರ, ಕಾಗಲವಾಡಿ, ಆಲೂರು, ಕೂಡ್ಲೂರು, ಹರದನಹಳ್ಳಿ, ಬಸವಪುರ, ವೆಂಕಟಯ್ಯನಛತ್ರ, ಬಸವಾಪುರ, ಮರಿಯಾಲ, ಹರವೆ, ಮಂಗಲ ಹಾಗೂ ಇನ್ನಿತರ ಗ್ರಾಮಗಳಲ್ಲಿ ಮಹಿಳೆಯರು ಮುಂಜಾನೆಯೇ ಮನೆ ತೊಳೆದು, ಬಾಳೆ, ಮಾವಿನ ಸೊಪ್ಪಿನ ತೋರಣ ಹಾಕಿ, ದೇವರ ಮನೆಗಳಲ್ಲಿ ವರಮಹಾಲಕ್ಷ್ಮೀಯನ್ನು ಹೂ ಹಾಗೂ ನೋಟು -ನಾಣ್ಯಗಳಿಂದ ಸಿಂಗರಿಸಿ ಅಕ್ಕಪಕ್ಕದ ಮನೆಯವರನ್ನು ಆಹ್ವಾನಿಸಿ ವಿಶೇಷವಾಗಿ ಪೂಜೆ ಸಲ್ಲಿಸಿದರು. ಎಲ್ಲೆಲ್ಲೂ ಹಬ್ಬದ ವಾತಾವರಣ ಮನೆಮಾಡಿತ್ತು.