

ಕೊಳ್ಳೇಗಾಲ: ಅಪರೂಪದ ಕಾಯಿಲೆ ಮಸ್ಕ್ಯೂಲರ್ ಡಿಸ್ಟ್ರೋಫಿಯಿಂದ ಬಳಲುತ್ತಿರುವ ಕೊಳ್ಳೇಗಾಲ ಒಂದೇ ಕುಟುಂಬದ ನಾಲ್ವರನ್ನು ಗುರುವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದಲ್ಲದೇ, ಸರ್ಕಾರದಿಂದ ನೆರವು ಕೊಡಿಸುವ ಭರವಸೆ ನೀಡಿದ್ದಾರೆ.
ಪಟ್ಟಣದ ಈದ್ಗಾ ಮೊಹಲ್ಲಾ ನಿವಾಸಿಗಳಾದ ತಾಸಿಮ್ ತಾಜ್(43), ಸಯ್ಯದ್ ಇದಾಯತ್(33), ಸಯ್ಯದ್ ಇಮ್ರಾನ್(32), ಸಯ್ಯದ್ ನೂರ್‌ಮಹಮದ್ (30) ಸ್ನಾಯು ಕ್ಷಯರೋಗದಿಂದ ಬಳಸುತ್ತಿರುವ ಕುರಿತು ವಿಜಯವಾಣಿ ದಿನಪತ್ರಿಕೆ ಆ.23 ರಂದು ಮನೆ ಮಂದಿಗೆಲ್ಲ ವಿಚಿತ್ರ ಖಾಯಿಲೆ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಇದನ್ನು ಗಮನಿಸಿದ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ವಿಶ್ವೇಶ್ವರಯ್ಯ ಬುಧವಾರ ಕೊಳ್ಳೇಗಾಲಕ್ಕೆ ಆಗಮಿಸಿ ರೋಗಿಗಳನ್ನು ಭೇಟಿ ಮಾಡಿದ್ದರು. ಅಲ್ಲದೇ ಶಾಸಕ ಎ.ಆರ್.ಕೃಷ್ಣಮೂರ್ತಿ ಸಹ ಖುದ್ದು ನಾನೇ ರೋಗಿಗಳ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸುವುದಾಗಿ ತಿಳಿಸಿದ್ದರು. ಮಾತಿನಂತೆ ಶಾಸಕರು ತಾಲೂಕು ಆರೋಗ್ಯ ಅಧಿಕಾರಿಗಳ ಜತೆಗೂಡಿ ಆದರ್ಶ ಬಡಾವಣೆಯಲ್ಲಿರುವ ಮನೆಯಲ್ಲಿ ನಾಲ್ವರು ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ರೋಗಿಗಳ ಸಂಬಂಧಿಯಾದ ಸೈಯದ್ ಸಲೀಂ ಮಾತನಾಡಿ, ವಾಸಿಯಾಗದ ಕಾಯಿಲೆಯಿಂದ ನಾಲ್ವರು ಖಿನ್ನತೆಗೊಳಗಾಗಿದ್ದಾರೆ. ಮೇಲೆದ್ದು ನಡೆದಡುವುದಕ್ಕೂ ಒಬ್ಬರ ಆಶ್ರಯಿಸಬೇಕು. ಜೀವನ ನಿರ್ವಹಣೆಗೆ ಬಹಳ ತೊಂದರೆಯಾಗಿದೆ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ತೋರಿಸಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.
ಡಿಎಸ್‌ಒ ನಾಗರಾಜು, ಟಿಎಚ್‌ಒ ಗೋಪಾಲ್ ಕಾಯಿಲೆ ಬಗ್ಗೆ ಶಾಸಕ ಕೃಷ್ಣಮೂರ್ತಿಗೆ ಮಾಹಿತಿ ನೀಡಿದರು. ಶಾಸಕರು ರೋಗಿಗಳಿಗೆ ಕೈಲಾದಷ್ಟು ಧನಸಹಾಯ ಮಾಡಿದರು. ನಂತರ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ತಾಲೂಕು ಆರೋಗ್ಯಾಧಿಕಾರಿಗಳ ವರದಿ ಆಧರಿಸಿ ಸರ್ಕಾರದ ಗಮನ ಸೆಳೆದು ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕುಟುಂಬದವರಿಗೆ ಭರವಸೆ ನೀಡಿದರು.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಅವರ ಗಮನ ಸೆಳೆಯುತ್ತೇನೆ. ವಿಶೇಷ ಪ್ರಕರಣ ಎಂದು ಪರಿಗಣಿಸಿ ಶಾಶ್ವತ ಪರಿಹಾರ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಜತೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದಲೂ ಸಾಲಸೌಲಭ್ಯ ಕೊಡಿಸಲಾಗುವುದು ಎಂದರು.
ವಿಜಯವಾಣಿ ವರದಿಗೆ ಮೆಚ್ಚುಗೆ: ವಿಜಯವಾಣಿ ಪತ್ರಿಕೆ ಮಸ್ಕ್ಯೂಲರ್ ಡಿಸ್ಟ್ರೋಫಿಯಿಂದ ನಾಲ್ವರು ಬಳಲುತ್ತಿರುವ ಬಗ್ಗೆ ವರದಿ ಪ್ರಕಟಿಸಿದೆ. ಇಂತಹ ಮಾನವೀಯ ವರದಿಯಿಂದ ಈ ಪ್ರಕರಣದ ಬಗ್ಗೆ ತಿಳಿದು ಭೇಟಿ ನೀಡಿದ್ದೇನೆ ಎಂದು ಶಾಸಕರು ಶ್ಲಾಘಿಸಿದರು.
ನಗರ ಆರೋಗ್ಯಧಿಕಾರಿ ನಾಗೇಂದ್ರ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಹರ್ಷವರ್ಧನ್, ನಟರಾಜು, ಸಮುದಾಯ ಆರೋಗ್ಯ ಅಧಿಕಾರಿ ಎನ್.ಪಿ. ವರದರಾಜು, ಶುಶ್ರೂಷಕಿಯರಾದ ಮಹಾಲಕ್ಷ್ಮೀ, ಅಂಜಲಿ, ನಗರಸಭಾ ಸದಸ್ಯ ಪ್ರಶಾಂತ್, ಮಾಜಿ ಸದಸ್ಯ ಅಕ್ಮಲ್‌ಪಾಷ ಮತ್ತಿತರರಿದ್ದರು.