

ಚಾಮರಾಜನಗರ: ಅಪರೂಪದ ಕಾಯಿಲೆ ಮಸ್ಕೂೃಲಾರ್ ಡಿಸ್ಟ್ರೋಫಿ ಅಥವಾ ಸ್ನಾಯು ಕ್ಷಯರೋಗದಿಂದ ಬಳಲುತ್ತಿರುವ ಕೊಳ್ಳೇಗಾಲದ ಒಂದೇ ಕುಟುಂಬದ ನಾಲ್ವರು ಸದಸ್ಯರಿಗೆ ಹೊಸ ಆಶಾಭಾವ ಮೂಡಿದೆ.
ಕೊಳ್ಳೇಗಾಲ ಪಟ್ಟಣದ ಈದ್ಗಾ ಮೊಹಲ್ಲಾ ನಿವಾಸಿಗಳಾದ ತಾಸಿಮ್ ತಾಜ್(43), ಇವರ ತಮ್ಮಂದಿರಾದ ಸಯ್ಯದ್ ಇದಾಯತ್(33), ಸಯ್ಯದ್ ಇಮ್ರಾನ್(32), ಸಯ್ಯದ್ ನೂರ್‌ಮಹಮದ್ (30) ಹಲವು ವರ್ಷಗಳಿಂದ ಸ್ನಾಯು ಕ್ಷಯ ರೋಗದಿಂದ ಬಳಲುತ್ತಿರುವ ಕುರಿತು ‘ವಿಜಯವಾಣಿ’ ದಿನಪತ್ರಿಕೆ ಆ. 23ರಂದು ‘ಮನೆಮಂದಿಗೆಲ್ಲ ವಿಚಿತ್ರ ಕಾಯಿಲೆ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ರೋಗಿಗಳ ಮನೆಗೆ ತೆರಳಿ ಆರೋಗ್ಯ ವಿಚಾರಿಸುವುದಾಗಿ ಹೇಳಿದ್ದರು.
ಅಂತೆಯೆ, ಅವರು ಬುಧವಾರ ಬೆಳಗ್ಗೆ ಕೊಳ್ಳೇಗಾಲಕ್ಕೆ ತೆರಳಿ ರೋಗಿಗಳನ್ನು ಭೇಟಿ ಮಾಡಿದರು. ಸಯ್ಯದ್ ಇದಾಯತ್, ಸಯ್ಯದ್ ಇಮ್ರಾನ್, ಸಯ್ಯದ್ ನೂರ್‌ಮಹಮದ್ ಅವರ ಶಕ್ತಿಹೀನ ಕಾಲು, ಕೈಗಳನ್ನು ಪರೀಕ್ಷಿಸಿದರು. ಆರೋಗ್ಯ ಸ್ಥಿತಿ ವಿಚಾರಿಸಿ ಧೈರ್ಯ ಹೇಳಿದರು.
ಲಭ್ಯವಿರುವ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿ ಅಗತ್ಯ ಸಲಹೆ, ಮಾರ್ಗದರ್ಶನ ನೀಡಿದರು. ದಾಖಲೆಗಳನ್ನು ಪರಿಶೀಲಿಸಿ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ತಲುಪಿಸುವ ಭರವಸೆ ನೀಡಿದರು.
ಈ ಕುರಿತು ಸಯ್ಯದ್ ಇದಾಯತ್ ‘ವಿಜಯವಾಣಿ’ ಜತೆ ಮಾತನಾಡಿ, ನಮ್ಮ ಆರೋಗ್ಯವನ್ನು ವಿಚಾರಿಸಲು ಮನೆ ಬಾಗಿಲಿಗೆ ಅಧಿಕಾರಿಯೊಬ್ಬರು ಬಂದಿದ್ದು ತುಂಬ ಖುಷಿಯಾಯಿತು. ಡಾ.ಕೆ.ಎಂ.ವಿಶ್ವೇಶ್ವರಯ್ಯ ಧೈರ್ಯ ಹೇಳಿ ಬದುಕಿನಲ್ಲಿ ಭರವಸೆ ಮೂಡಿಸಿದರು. ಚಿಕಿತ್ಸೆಗೆ ಸಹಕರಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಕೋಟ್..
ಕೊಳ್ಳೇಗಾಲದ ಒಂದೇ ಕುಟುಂಬದ ನಾಲ್ವರು ಸದಸ್ಯರಿಗೆ ಮಸ್ಕೂೃಲಾರ್ ಡಿಸ್ಟ್ರೋಫಿ ಬಂದಿರುವುದು ಪತ್ರಿಕೆ ಮೂಲಕ ನನ್ನ ಗಮನಕ್ಕೆ ಬಂದಿದೆ. ನಾನೂ ರೋಗಿಗಳನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸುತ್ತೇನೆ.
ಎ.ಆರ್.ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ