

ಚಾಮರಾಜನಗರ : ಸರ್ಕಾರದ ಮಹಾತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯಿಂದ ನಿತ್ಯವೂ ಸಾರಿಗೆ ಸಂಸ್ಥೆ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಇನ್ನಿತರರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ.
ಚಾಮರಾಜನಗರ ವಿಭಾಗದಲ್ಲಿ ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ ಒಟ್ಟು 77,82,336 ಮಹಿಳೆಯರು ಹಾಗೂ 1,05,151 ಮಕ್ಕಳು ಸಂಚಾರ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರ 23.87 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕಿದೆ. ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ಜಾರಿಗೆ ಬಂದಿರುವ ಉಚಿತ ಸಾರಿಗೆ ಬಸ್ ಸಂಚಾರ ಸಾಕಷ್ಟು ಮಹಿಳೆಯರು ಹಾಗೂ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದೆ. ಇದರ ನಡುವೆ, ಸಾಕಷ್ಟು ಕಡೆಗಳಲ್ಲಿ ಸಮರ್ಪಕ ರೀತಿಯಲ್ಲಿ ಬಳಕೆಯಾಗದೆ ನಿತ್ಯವೂ ಒಂದಿಲ್ಲೊಂದು ಸಮಸ್ಯೆಗಳು ತಲೆದೋರುತ್ತಿವೆ. ಚಾಮರಾಜನಗರದಿಂದ ಮೈಸೂರು, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಮಾರ್ಗವಾಗಿ ಸಂಚರಿಸುವ ಬಸ್‌ಗಳಲ್ಲಿ, ಪ್ರತಿನಿತ್ಯವೂ ನೂಕುನುಗ್ಗಲು ಉಂಟಾಗುತ್ತಿದ್ದು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಗ್ರಾಮಾಂತರ ಪ್ರದೇಶದಲ್ಲೂ ಸಂಚರಿಸುವ ಸಾರಿಗೆ ಬಸ್‌ಗಳಲ್ಲೂ ಇದೇ ಸಮಸ್ಯೆ ತಲೆದೋರಿದ್ದು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ದೂರದ ಊರಿಗೆ ಪ್ರಯಾಣಿಸುವವರಿಗೆ ಸೀಟು ಸಿಗದೆ ಪರದಾಡುವಂತಾಗಿದೆ.
ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಶ್ರೀ ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಗೋಪಾಲಸ್ವಾಮಿ ಬೆಟ್ಟ ಹಾಗೂ ಇನ್ನಿತರ ಕಡೆಗಳಿಗೆ ಸಂಚರಿಸುವ ಮಾರ್ಗದಲ್ಲಿ ಬಸ್‌ಗಳಲ್ಲಿ ಜನರು ಹೆಚ್ಚಾಗಿ ಪ್ರಯಾಣ ಮಾಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಬಸ್ ನಿಲುಗಡೆ ಮಾಡದೆ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ಶಕ್ತಿ ಯೋಜನೆಯಿಂದಾಗುತ್ತಿರುವ ಅನುಕೂಲ ಹಾಗೂ ಸಮಸ್ಯೆ ಬಗ್ಗೆ ಸಾರ್ವಜನಿಕರು ವಿಜಯವಾಣಿ ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿಕೊಡಿ
ಶಕ್ತಿ ಯೋಜನೆಯಿಂದ ಪ್ರಮುಖವಾಗಿ ವಿದ್ಯಾರ್ಥಿಗಳು, ಸರ್ಕಾರಿ ಮಹಿಳಾ ನೌಕರರು ಹಾಗೂ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ. ಮೈಸೂರು-ಚಾಮರಾಜನಗರ ಮಾರ್ಗವಾಗಿ ಸಂಚರಿಸುವ ಬಸ್‌ಗಳಲ್ಲಿ ನಿತ್ಯವೂ ನೂಕುನುಗ್ಗಲು ಉಂಟಾಗುತ್ತಿದೆ. ಈ ಯೋಜನೆಯನ್ನು ಬಡ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಸೀಮಿತಗೊಳಿಸಿದ್ದರೆ ಅನುಕೂಲವಾಗಿತ್ತಿತ್ತು. ಲಕ್ಷಾಂತರ ರೂ. ಸಂಬಳ ತೆಗೆದುಕೊಳ್ಳುವ ಮಹಿಳೆಯರೂ ಉಚಿತವಾಗಿ ಪ್ರಯಾಣಿಸುತ್ತಾರೆ. ಮಹಿಳೆಯರಿಗಾಗಿ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಿದರೆ ಸಮಸ್ಯೆ ಸರಿಹೋಗಬಹುದು.
ಕಲೆ ನಟರಾಜ್
ನಾಗರಿಕ, ಚಾಮರಾಜನಗರ
ನಿಂತುಕೊಂಡೇ ಪ್ರಯಾಣಿಸಬೇಕಿದೆ
ಶಕ್ತಿ ಯೋಜನೆ ಜಾರಿಗೊಂಡ ಬಳಿಕ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಹಾಗೂ ಇನ್ನಿತರ ಕಡೆಗಳಿಂದ ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೆರಳುತ್ತಿದ್ದಾರೆ. ಇದರಿಂದ ಸಾರಿಗೆ ಬಸ್ಸುಗಳು ಕಿಕ್ಕಿರಿದು ತುಂಬಿದ್ದು ನಿಂತುಕೊಂಡೇ ಪ್ರಯಾಣ ಬೆಳೆಸುತ್ತಿದ್ದಾರೆ. ಇದರಿಂದ ಹನೂರು ಭಾಗದ ಜನರು ಮ.ಬೆಟ್ಟಕ್ಕೆ ತೆರಳಬೇಕಾದರೆ ಹೆಚ್ಚಾಗಿ ಖಾಸಗಿ ಬಸ್‌ಗಳ ಮೊರೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ, ಮಹದೇಶ್ವರ ಬೆಟ್ಟಕ್ಕೆ ತೆರಳಲು ಹನೂರಿನಿಂದ ಪ್ರತ್ಯೇಕ ಬಸ್ ಬಿಡಬೇಕು.
ಶಿವಕುಮಾರ್
ಅಜ್ಜಿಪುರ, ಹನೂರು
ವಿದ್ಯಾರ್ಥಿಗಳಿಗೆ ತೊಂದರೆ
ಈ ಹಿಂದೆ ನಿಗದಿತ ವೇಳೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳಿಲ್ಲದ ಪರಿಣಾಮ, ಸಮರ್ಪಕ ಬಸ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಹನೂರಿನಲ್ಲಿ ಹಲವು ಬಾರಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಆದರೆ ಇದೀಗ ಶಕ್ತಿ ಯೋಜನೆ ಜಾರಿಯಾಗಿರುವುದರಿಂದ ಬಸ್‌ಗಳಲ್ಲಿ ಜನರು ಕಿಕ್ಕಿರಿದು ತುಂಬಿರುತ್ತಾರೆ. ಇದರಿಂದ ವಿದ್ಯಾರ್ಥಿಗಳು ನಿಗದಿತ ವೇಳೆಗೆ ಶಾಲಾ ಕಾಲೇಜುಗಳಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೆಚ್ಚಿನ ಬಸ್ ಕಲ್ಪಿಸಬೇಕು.
ನಿರಂಜನ್
ನಾಗರಿಕ, ಹನೂರು
ಕಾಳಜಿ ಕಡಿಮೆಯಾಗುತ್ತಿದೆ
ಉಚಿತ ಬಸ್ ವ್ಯವಸ್ಥೆಯಿಂದ ಮಾತೆಯರು ಬಸ್‌ನಲ್ಲಿ ಗಲಾಟೆಗೆ ಇಳಿದಿದ್ದಾರೆ. ಹೆಚ್ಚಾಗಿ ಮಹಿಳೆಯರು ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವುದರಿಂದ ವಿದ್ಯಾರ್ಥಿಗಳಿಗೆ, ನೌಕರರಿಗೆ ತೊಂದರೆಯಾಗಿದೆ. ಕೆಲವು ಕಡೆಗಳಲ್ಲಿ ಬಸ್ ನಿಲುಗಡೆ ಮಾಡುವುದಿಲ್ಲ. ನಿಜವಾಗಿಯೂ ಸರ್ಕಾರಕ್ಕೆ ಜನರಿಗೆ ಒಳಿತು ಮಾಡಬೇಕೆಂದರೆ ಶಿಕ್ಷಣ, ಆರೋಗ್ಯ ಸೇವೆಯನ್ನು ಉಚಿತಗೊಳಿಸಲಿ. ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡಿದ್ದರೂ ಮಹಿಳೆಯರಿಗೆ ಅನುಕೂಲವಾಗುತ್ತಿತ್ತು. ಮಹಿಳೆಯರು ಪ್ರವಾಸಕ್ಕೆ ಹೆಚ್ಚು ಹೋಗುತ್ತಿರುವುದರಿಂದ ಮನೆಯಲ್ಲಿರುವ ಹಿರಿಯರು, ಮಕ್ಕಳ ಮೇಲೆ ಕಾಳಜಿ ಕಡಿಮೆಯಾಗಿದೆ.
ರವಿಶಂಕರ್
ಮುಖಂಡ, ಸತ್ತೇಗಾಲ
ಜನಕಲ್ಯಾಣ ಕಾರ್ಯಕ್ರಮ
ಮುಖ್ಯಮಂತ್ರಿಗಳ ಗ್ಯಾರಂಟಿ ಯೋಜನೆಗಳು ಜನಕಲ್ಯಾಣಕ್ಕೆ ಪೂರಕವಾಗಿವೆ. ಅದರಲ್ಲೂ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಈ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಸರ್ಕಾರ ಒತ್ತು ನೀಡಿದೆ. ಬಡ ಕುಟುಂಬ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಸಾಕಷ್ಟು ಉಪಕಾರಿಯಾಗಿದೆ.
ಅಶೋಕ್
ಮುಡಿಗುಂಡ, ಕೊಳ್ಳೇಗಾಲ
ಸಮಾನತೆಯ ಆಶಯ
ರಾಜ್ಯದ ಪ್ರತಿಯೊಬ್ಬ ಮಹಿಳೆ ಶಕ್ತಿ ಯೋಜನೆಯ ಮೂಲಕ ಕೆಎಸ್‌ಆರ್‌ಟಿಸಿ ಬಸ್ ಉಚಿತ ಪ್ರಯಾಣ ಯೋಜನೆ ಜಾರಿಗೊಳಿಸಿದ್ದು ಇದು ಯಶಸ್ವಿಯಾಗಿ ಸಾಗುತ್ತಿದೆ. ಸಾರಿಗೆ ನಿಗಮಕ್ಕೆ ಈ ಯೋಜನೆ ವರದಾನವಾಗುತ್ತಿದೆ. ಎಲ್ಲ ವರ್ಗದ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದು ಸಮಾನತೆಯ ಆಶಯವಾಗಿದೆ. ಈ ಯೋಜನೆಯಿಂದ ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹರಿದು ಬರುತ್ತಿದ್ದಾರೆ. ವ್ಯಾಪಾರ ವಹಿವಾಟಿನಲ್ಲೂ ಪ್ರಗತಿ ಉಂಟಾಗಿದೆ.
ವೈ.ಆರ್.ಪ್ರಕಾಶ್
ಯರಿಯೂರು, ಯಳಂದೂರು
ಭಿನ್ನಾಭಿಪ್ರಾಯ ಮೂಡಿಸುತ್ತಿದೆ
ಶಕ್ತಿ ಯೋಜನೆಯಲ್ಲಿ ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದರೆ ಉತ್ತಮವಾಗಿತ್ತು. ಈ ಯೋಜನೆಯಿಂದ ಮನೆಗಳಲ್ಲಿ ಭಿನ್ನಾಭಿಪ್ರಾಯ ಮೂಡುವಂತಾಗಿದೆ. ಅನವಶ್ಯಕವಾಗಿ ಮಹಿಳೆಯರು ಪ್ರಯಾಣ ಮಾಡುವುದರಿಂದ ಬೇರೆ ಪ್ರಯಾಣಿಕರಿಗೆ ಹಾಗೂ ನಿತ್ಯವೂ ಸಂಚರಿಸುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಲಿ.
ಭಾಗ್ಯಶ್ರೀ
ಬೇರಂಬಾಡಿ, ಗುಂಡ್ಲುಪೇಟೆ
ಸೀಮಿತಗೊಳಿಸುವುದು ಉತ್ತಮ
ಶಕ್ತಿ ಯೋಜನೆ ಅನವಶ್ಯಕ ಯೋಜನೆಯಾಗಿದೆ. ಇದು ಹೀಗೇ ಮುಂದುವರಿದರೆ ಸಮಾಜದ ಅವನತಿಗೆ ಕಾರಣವಾಗುತ್ತದೆ. ನಿತ್ಯವೂ ಸಂಚರಿಸುವ ನೌಕರರು ಮತ್ತು ವಿದ್ಯಾರ್ಥಿಗಳು ಬಸ್ ಹತ್ತಲು ಆಗುತ್ತಿಲ್ಲ. ಈ ಯೋಜನೆಯಿಂದ ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ನಿತ್ಯವೂ ಬಸ್‌ಗಳಲ್ಲಿ ನೂಕುನುಗ್ಗಲು ಉಂಟಾಗುತ್ತಿದೆ. ಉಚಿತ ಪ್ರಯಾಣವನ್ನು ಹಿರಿಯ ನಾಗರಿಕರಿಗೆ ಸೀಮಿತಗೊಳಿಸುವುದು ಉತ್ತಮ.
ಮಹಾದೇವಪ್ಪ
ದೇವರಹಳ್ಳಿ, ಗುಂಡ್ಲುಪೇಟೆ
ಪತ್ರ ಬರೆಯಲಾಗಿದೆ
ಕೆಎಸ್‌ಆರ್‌ಸಿಟಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಸಾಕಷ್ಟು ಮಹಿಳೆಯರು ಇದರ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ಈಗ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಹಾಗೂ ಬಸ್‌ಗಳ ಕೊರತೆಯ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಅಶೋಕ್ ಕುಮಾರ್
ವಿಭಾಗೀಯ ನಿಯಂತ್ರಣಾಧಿಕಾರಿ, ಚಾಮರಾಜನಗರ
ಕುಟುಂಬವೂ ಸಂಚಾರ ಮಾಡುತ್ತದೆ
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಮಹಿಳೆಯರು ಹಾಗೂ ಮಕ್ಕಳಿಗೆ ಅನುಕೂಲವಾಗಿದೆ. ಇದೊಂದು ಉತ್ತಮ ಕಾರ್ಯಕ್ರಮ. ಹಲವು ಮಹಿಳೆಯರಿಂದ ಮೆಚ್ಚುಗೆ ಪಡೆದಿದೆ. ಯೋಜನೆ ಪ್ರಾರಂಭದಲ್ಲಿ ಸಮಸ್ಯೆಗಳು ಬಂದಿರಬಹುದು. ಆದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳು ಇರುವುದಿಲ್ಲ. ಮಹಿಳೆಯರ ಜತೆಗೆ ಇಡೀ ಕುಟುಂಬ ಬಸ್‌ನಲ್ಲಿ ಸಂಚಾರ ಮಾಡುತ್ತದೆ. ಇದರಿಂದ ಕೆಎಸ್‌ಆರ್‌ಟಿಸಿಗೆ ಹೆಚ್ಚಿನ ಆದಾಯವೂ ಬರುತ್ತದೆ. ಖಾಲಿಯಾಗಿ ಸಂಚರಿಸುತ್ತಿದ್ದ ಸಾರಿಗೆ ಬಸ್‌ಗಳು ಇದೀಗ ಭರ್ತಿಯಾಗಿದೆ.
ಡಿ.ಕೆ.ಶಿವಕುಮಾರ್
ದೇಮಹಳ್ಳಿ ಗ್ರಾಪಂ ಸದಸ್ಯ, ಚಾಮರಾಜನಗರ