

ಚಾಮರಾಜನಗರ: ಪ್ರತಿ ಮನೆಗೂ ಅಂಬೇಡ್ಕರ್ ವಿಚಾರಧಾರೆ ತಲುಪಬೇಕು. ಆ ಮೂಲಕ ಮಕ್ಕಳಿಗೆ ಸಂವಿಧಾನದ ಮಹತ್ವ ತಿಳಿಸುವ ಕೆಲಸವಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಲಹೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂವಿಧಾನ ಉಳಿವಿಗಾಗಿ ಭೀಮ ಸಂಕಲ್ಪ ಸಮಾವೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಅಂಬೇಡ್ಕರ್ ಅವರ ಹೋರಾಟದಿಂದ ನಮಗೆಲ್ಲ ಶ್ರೇಷ್ಠ ಸಂವಿಧಾನ ಸಿಕ್ಕಿದ್ದು, ಕೆಲವರಿಗೆ ಮಾತ್ರ ಲಾಭ ಎನ್ನುವ ಭಾವನೆ ದೂರವಾಗಬೇಕು. ಭೀಮ ಸಂಕಲ್ಪ ಸಮಾವೇಶ ಚಾಮರಾಜನಗರದಿಂದ ಬೀದರ್‌ವರೆಗೆ ಯಶಸ್ವಿಯಾಗಲಿ ಎಂದು ಆಶಿಸಿದರು.
ನಿಮಗೆಲ್ಲ ರಕ್ಷಣೆ ಕೊಡೋ ಸರ್ಕಾರ ಈಗ ಬಂದಿದೆ. 2013 ರಿಂದ 2018ರವರೆಗೆ ಜನಪರ ಸರ್ಕಾರ ಇತ್ತು. ಆಗ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದವು. ಆದರೆ ಕಳೆದ ಅವಧಿಯಲ್ಲಿ ಹಲವು ಯೋಜನೆಗಳನ್ನು ರದ್ದುಪಡಿಸಲಾಯಿತು. ಬೇರೆ ಸರ್ಕಾರದವರು ರದ್ದುಪಡಿಸಿದ ಯೋಜನೆಗಳನ್ನು ನಾವು ಜಾರಿಗೆ ತರುತ್ತಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ/ಎಸ್ಟಿಗೆ ಅನುದಾನ ನೀಡಿದ್ದೆವು. ಈಗ ಮತ್ತೆ ಅದೇ ರೀತಿ ನೀಡುತ್ತೇವೆ. ಮುಂದಿನ ದಿನಗಳಲ್ಲಿ ನಿಮ್ಮ ಪರವಾಗಿ, ನಿಮ್ಮನ್ನು ರಕ್ಷಣೆ ಮಾಡುವ ಸರ್ಕಾರ ಇರಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಸಂವಿಧಾನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಸಂವಿಧಾನವನ್ನು ನಾವು ರಕ್ಷಣೆ ಮಾಡಿದರೆ, ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ತಿಳಿಸಿದರು. ಚಾಮರಾಜನಗರ ಜಿಲ್ಲೆ ಹೋರಾಟದ ಭೂಮಿ. ಮಲೆ ಮಹದೇಶ್ವರರು, ಸಿದ್ದಪ್ಪಾಜಿ, ಮಂಟೇಸ್ವಾಮಿ, ಬಿಳಿಗಿರಿರಂಗನಾಥಸ್ವಾಮಿ ನಡೆದಾಡಿದ ನೆಲ. ಸಾಹಿತ್ಯಕ್ಕೆ ತಾಯಿ ಬೇರಾಗಿರುವ ಜನಪದವನ್ನು ನೀಡಿದ್ದೇ ಈ ಜಿಲ್ಲೆ. ಇಲ್ಲಿ ಮೂಲನಿವಾಸಿಗಳು ದಲಿತರು ಎಂದು ಬಣ್ಣಿಸಿದರು.
ಚಲನಶೀಲತೆಯೇ ಸಂವಿಧಾನದ ಆಶಯ. ಭಾರತ ಅನೇಕ ಜಾತಿ, ಧರ್ಮ, ಭಿನ್ನ ಆಹಾರ ಪದ್ಧತಿ ಇರುವ ದೇಶ. ಹೀಗೆ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ಆದರೆ ಕೆಲವರು ಹೀಗೆ ಯೋಚನೆ ಮಾಡುವುದಿಲ್ಲ. ಸೈದ್ಧಾಂತಿಕ ಭ್ರಷ್ಟಾಚಾರಿಗಳು ನಿಮ್ಮ ಪರವಾಗಿ ನಿಲ್ಲುವುದಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಕ್ಷೀಣಿಸುತ್ತಿದೆ. ಯುವಜನರನ್ನು ಸರಿದಾರಿಗೆ ತರುವ ಉದ್ದೇಶದಿಂದ ಸಂವಿಧಾನ ಓದು ಕಾರ್ಯಕ್ರಮವನ್ನು ರೂಪಿಸಲಾಗಿದೆ. ಆ.29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಮಾತನಾಡಿ, ಸಂವಿಧಾನದ ಆಶಯಗಳನ್ನು ಬಿಜೆಪಿ ಮತ್ತು ಸಂಘ ಪರಿವಾರ ವಿರೋಧಿಸುತ್ತದೆ. ಸಿಎಎ, ಎನ್‌ಆರ್‌ಸಿಗೆ ಕೈ ಹಾಕುವ ಮೂಲಕ ಅಲ್ಪಸಂಖ್ಯಾತರು, ಆದಿವಾಸಿಗಳನ್ನು ದೇಶದಿಂದ ಓಡಿಸುವ ಉದ್ದೇಶ ಹೊಂದಿದ್ದಾರೆ. ಹಿಟ್ಲರ್ ಸಂಸ್ಕೃತಿ, ಹುಸಿ ರಾಷ್ಟ್ರೀಯತೆಯೇ ಬೇರೆ. ಅಂಬೇಡ್ಕರ್ ಅವರ ರಾಷ್ಟ್ರೀಯತೆಯೇ ಬೇರೆ. ಅಂಬೇಡ್ಕರ್ ವಾದ ದೇಶವನ್ನು ಉಳಿಸುತ್ತದೆ. ಕಳೆದ ಸಲ ಮತ ಹಾಕಿ ಅವರಿಗೆ ಅವಕಾಶ ನೀಡಿದ್ದೀರಿ. ಮುಂದಿನ ಚುನಾವಣೆಯಲ್ಲಿ ಮತ ನೀಡದೆ ಅಧಿಕಾರ ವಾಪಸ್ ತೆಗೆದುಕೊಳ್ಳಿ ಎಂದರು.
ಇದೇ ವೇಳೆ ಸಾಹಿತಿ ಸಿದ್ದರಾಜು ದೊಡ್ಡರಾಯಪೇಟೆ ಅವರ ನೊಂದವರ ಧ್ವನಿ ಕೃತಿಯನ್ನು ಗಣ್ಯರು ಬಿಡುಗಡೆ ಮಾಡಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೋಧಿರತ್ನ ಬಂತೇಜಿ, ಬಸವಾನಂದ ಸ್ವಾಮೀಜಿ, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್‌ಪ್ರಸಾದ್, ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕಿ ಡಾ.ಲೀಲಾ ಸಂಪಿಗೆ, ನಗರಸಭೆ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ, ಸಮಾಜ ಸೇವಕರಾದ ವೆಂಕಟರಮಣಸ್ವಾಮಿ(ಪಾಪು), ಓಲೆ ಮಹದೇವು, ಸಿ.ಎಂ.ನರಸಿಂಹಮೂರ್ತಿ, ಕೆ.ಎಂ.ನಾಗರಾಜು, ಸಿ.ಎಂ.ಶಿವಣ್ಣ ಇತರರು ಹಾಜರಿದ್ದರು.
ಕೇಸರಿ ಹೊದಿಸುವ ಕೆಲಸ ಮಾಡ್ತಿದ್ದಾರೆ
ದನ ಕೊಂದರೆ ಜೈಲು, ಜನರನ್ನು ಕೊಂದರೆ ಉನ್ನತ ಪದವಿ ನೀಡುವವರು ಸಂವಿಧಾನಕ್ಕೆ ಕೇಸರಿ ಹೊದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರಿನ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಟೀಕಿಸಿದರು.
ಜಾತಿ, ಧರ್ಮರಹಿತ ಸಂವಿಧಾನವನ್ನು ಅಂಬೇಡ್ಕರ್ ನೀಡಿದರು. ಸಂವಿಧಾನಕ್ಕೆ ಕೈ ಹಾಕುವವರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ ನೀಡದೆ ಅಧಿಕಾರದಿಂದ ದೂರವಿಡಬೇಕು. ಇದು ಭೀಮವಾದ ಮತ್ತು ಮನುವಾದದ ನಡುವಿನ ಸಂಘರ್ಷ. ದೇಶದ ಭವಿಷ್ಯ ಮಠ, ಮಂದಿರಗಳಲ್ಲಿ ಅಡಗಿಲ್ಲ. ಮತ ಹಾಕಲು ಹಣದ ಆಮಿಷಕ್ಕೆ ಒಳಗಾಗಬಾರದು ಎಂದು ತಿಳಿಸಿದರು.
ಕಾಂಗ್ರೆಸ್ ಕಚೇರಿ, ದೀನಬಂಧುಗೆ ಭೇಟಿ:
ಸಚಿವ ಸತೀಶ್ ಜಾರಕಿಹೊಳಿ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮುಖಂಡರು ಮತ್ತು ಕಾರ್ಯಕರ್ತರನ್ನು ಮಾತನಾಡಿಸಿದರು. ಸಮಾವೇಶದ ಬಳಿಕ ದೀನಬಂಧು ಶಾಲೆಗೆ ಭೇಟಿ ನೀಡಿ ಮಕ್ಕಳನ್ನು ಮಾತನಾಡಿಸಿದರು.