

ಚಾಮರಾಜನಗರ : ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆ, ವಿವಿಧ ಇಲಾಖೆಗಳ ಪ್ರಗತಿಯನ್ನು ಒಳಗೊಂಡ ಸ್ವಾತಂತ್ರ್ಯದ ಸಂದೇಶ, ಆಕರ್ಷಕ ಪಥ ಸಂಚಲನ, ದೇಶ ಪ್ರೇಮ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಮಹತ್ವ ಸಾರುವ ನೃತ್ಯ ರೂಪಕಗಳು 77 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ 77 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಶು ಸಂಗೋಪನೆ ಮತ್ತು ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಧ್ವಜಾರೋಹಣ ನೆರವೇರಿಸಿ, ಪೊಲೀಸ್ ಹಾಗೂ ಶಾಲಾ ಮಕ್ಕಳ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ, ಸ್ವಾತಂತ್ರ್ಯ ದಿನಾಚರಣೆ ಸಂದೇಶ ನೀಡಿದರು.
ದೇಶದ ಸರ್ವತೋಮುಖ ಪ್ರಗತಿಯಲ್ಲಿ ಭಾಗಿಯಾಗಿರುವ ನಾವೆಲ್ಲರೂ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದೇವೆ. ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಸ್, ಜವಹರ್‌ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸಿ, ವೀರ ಸಾವರ್ಕರ್, ಚಂದ್ರಶೇಖರ್ ಆಜಾದ್, ಝಾನ್ಸಿ ರಾಣಿ ಲಕ್ಷ್ಮೀಭಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಮುಂತಾದ ಹಲವಾರು ದೇಶ ಭಕ್ತರ ತ್ಯಾಗ ಬಲಿದಾನ, ಸಮರ್ಪಣೆಯ ಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ. ಜಿಲ್ಲೆಯೂ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದು, ಹಲವಾರು ಹೋರಾಟಗಾರರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ದೇಶಕ್ಕೆ ಗೌರವ ತಂದಿದ್ದಾರೆ. ಭಾರತ ನಮಗೆ ಭೂ ಪ್ರದೇಶ ಮಾತ್ರವಲ್ಲ, ನಮ್ಮ ಮಾತೃಭೂಮಿಯಾಗಿದೆ. ದೇಶ ಪ್ರೇಮವೆನ್ನುವುದು ಮಾತೃಪ್ರೇಮದ ರೂಪದಲ್ಲಿ ಭಾವನಾತ್ಮಕ ಬೆಸುಗೆಯಾಗಿದೆ ಎಂದರು.
ಒಂದು ಕಾಲಕ್ಕೆ ಸಂಪದ್ಭರಿತವಾಗಿದ್ದ ನಮ್ಮ ದೇಶದ ಅಪಾರ ಸಂಪತ್ತು, ಸಂಸ್ಕೃತಿ ಪರಕೀಯರ ದಾಳಿಯಿಂದ ನಾಶವಾದರೂ ಅದನ್ನು ಮರಳಿ ಕಟ್ಟಿದ ಧೀಮಂತ ಸಂಸ್ಕೃತಿ ಭಾರತದ್ದಾಗಿದೆ. ರಾಷ್ಟ್ರೀಯ ಏಕತೆ ಮತ್ತು ಭಾವೈಕ್ಯತೆಯನ್ನು ಸಾಧಿಸುವುದರ ಜತೆಗೆ ನಮ್ಮಲ್ಲಿರುವ ವಿುಲ ಅವಕಾಶಗಳನ್ನು ಬಳಸಿಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದಾ ಹಾಗೂ ಇತರರು ಉಪಸ್ಥಿತರಿದ್ದರು.
ಆರ್ಥಿಕ ಸಬಲೀಕರಣದ ಗ್ಯಾರೆಂಟಿ:
ಸರ್ಕಾರ ಅಧಿಕಾರಕ್ಕೆ ಬರುತ್ತಲೇ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಈ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಾಗಲಿದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 2,77,574 ಲಾನುಭವಿಗಳ ನಿಗದಿಪಡಿಸಲಾಗಿ, ಈವರೆಗೆ 2,36,970 ಲಾನುಭವಿಗಳು ನೋಂದಾಯಿಸಿ ಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಯಲ್ಲಿ ಶೇ.66.47 ರಷ್ಟು ಪ್ರಗತಿ ಸಾಧಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ನೀಡುವ ಆಹಾರ ಧಾನ್ಯದ ಬದಲಿಗೆ 11.71 ಕೋಟಿ ರೂ. ಹಣವನ್ನು ಸಂದಾಯಮಾಡಲಾಗಿದೆ. ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ 77,82,336 ಮಹಿಳೆಯರು ಹಾಗೂ 1,05,151 ಮಕ್ಕಳು ಉಚಿತವಾಗಿ ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದರು.
ವಿವಿಧ ಇಲಾಖೆಗಳ ಪ್ರಗತಿ:
ಜಿಲ್ಲೆಯ ಕೃಷಿ, ಸಾಮಾಜಿಕ ಅರಣ್ಯ ವಿಭಾಗ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ, ಪಶು ಪಾಲನಾ ಇಲಾಖೆ, ಕೈ ಮಗ್ಗ ಮತ್ತು ಜವಳಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ನಗರೋತ್ಥಾನ ಯೋಜನೆ, ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆ, ಸ್ವಚ್ಛ ಭಾರತ್ ಅಭಿಯಾನ, ಅಮೃತ ನಗರರೋತ್ಥಾನ ಯೋಜನೆ, ಕೈಗಾರಿಕೆ ಮತ್ತು ವಾಣಿಜ್ಯ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಶ್ರೀ ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಇಲಾಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವುದಾಗಿ ಹೇಳಿದರು.
ಆಕರ್ಷಕ ಪಥ ಸಂಚಲನ:
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಸಿಬ್ಬಂದಿ ಹಾಗೂ ಶಾಲೆಯ ವಿದ್ಯಾರ್ಥಿಗಳ ಪಥ ಸಂಚಲನ ಗಮನ ಸೆಳೆಯಿತು. ಜಿಲ್ಲಾ ಕೇಂದ್ರ ಸ್ಥಾನ ಪೊಲೀಸ್ ತುಕಡಿ, ಸಿವಿಲ್ ಪೊಲೀಸ್ ತುಕಡಿ, ಅರಣ್ಯ ಗಸ್ತು ಪಡೆ, ಅಬಕಾರಿ ದಳ, 2 ಗೃಹ ರಕ್ಷಕ ದಳ, ನವೋದಯ ಎನ್ ಸಿಸಿ ಹೊಂಡರಬಾಳು, ಸಂತ ಜೋಸೆಫ್ ಪ್ರೌಢಶಾಲೆ, ವಿಎಚ್‌ಪಿ, ಜೆಎಸ್‌ಎಸ್, ಬಂಜಾರಾ ಇಂಡಿಯಾ, ಶ್ರೀರಾಮಚಂದ್ರ, ಸೇವಾ ಭಾರತಿ ಕನ್ನಡ ಮಾಧ್ಯಮ, ಎಂಸಿಎಸ್ ಪ್ರೌಢಶಾಲೆ, ಸರ್ಕಾರಿ ಜೂನಿಯರ್ ಕಾಲೇಜು, ಆದರ್ಶ ವಿದ್ಯಾಲಯ ಪ್ರೌಢಶಾಲಾ ವಿದ್ಯಾಥಿಗಳು ಪಥ ಸಂಚಲನ ನಡೆಸಿದರು. ಜಿಲ್ಲಾ ಶಸ್ತ್ರ ಪೊಲೀಸ್ ತಂಡ ಬ್ಯಾಂಡ್ ನುಡಿಸಿ ಮೆಚ್ಚುಗೆ ಗಳಿಸಿದರು.
ಗಮನ ಸೆಳೆದ ನೃತ್ಯರೂಪಕ:
ಸಾಂಸ್ಕೃತಿಕ ಕಾರ್ಯಕ್ರಮಲ್ಲಿ ಸೇವಾ ಭಾರತಿ ವಿದ್ಯಾ ಸಂಸ್ಥೆಯ ಮಕ್ಕಳು ನಡೆಸಿಕೊಟ್ಟ ಭಾರತಾಂಬೆ ನಿನ್ನ ಜನ್ಮದಿನ ನೃತ್ಯರೂಪಕ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಮಾಡಿದ ಝಾನ್ಸಿ ರಾಣಿ ಲಕ್ಷ್ಮೀಭಾಯಿ ಜೀವನ ಆಧಾರಿತ ನೃತ್ಯ ರೂಪಕ, ಸಂತ ಜೋಸೆಫರ ವಿದ್ಯಾಲಯದ ಮಕ್ಕಳು ಮತ್ತು ಯೂನಿವರ್ಸ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ದೇಶಭಕ್ತಿ ಕುರಿತ ನೃತ್ಯ ಹಾಗೂ ಜೆಎಸ್‌ಎಸ್ ಬಾಲಕಿಯರ ಪ್ರೌಢ ಶಾಲೆಯ ಸುಮಾರು 400 ವಿದ್ಯಾರ್ಥಿಗಳು ನಡೆಸಿಕೊಟ್ಟ ಝಾನ್ಸಿ ರಾಣಿ ಲಕ್ಷ್ಮೀಭಾಯಿ ಶೌರ್ಯ, ಪೌರುಷದ ನೃತ್ಯ ರೂಪಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಬಹುಮಾನ ವಿತರಣೆ:
ಪಥ ಸಂಚಲನದಲ್ಲಿ ಭಾಗವಹಿಸಿದ ಪೊಲೀಸ್ ಶಸ ತುಕಡಿ ಪ್ರಥಮ ಸ್ಥಾನ, ಅಬಕಾರಿ ಗಸ್ತುಪಡೆ ದ್ವಿತೀಯ ಸ್ಥಾನ ಮತ್ತು ಗೃಹ ರಕ್ಷಕ ದಳ ತೃತೀಯ ಸ್ಥಾನ ಪಡೆದುಕೊಂಡರು. ಶಾಲಾ ಮ್ಕಕಳ ಪಥ ಸಂಚಲನದಲ್ಲಿ ಎನ್‌ಸಿಸಿ ನವೋದಯ ಶಾಲೆ ಪ್ರಥಮ, ಎಂಸಿಎಸ್ ಪ್ರೌಢಶಾಲೆ ದ್ವಿತೀಯ, ಬಂಜಾರ ಪ್ರೌಢಶಾಲೆ ಮತ್ತು ಆದರ್ಶ ವಿದ್ಯಾಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಹಂಚಿಕೊಂಡರು. ಸಾಂಸ್ಕೃತಿಕ ಕಾತರ್ಯಕ್ರಮದಲ್ಲಿ ಜೆಎಸ್‌ಎಸ್ ಬಾಲಕಿಯರ ಪ್ರೌಢಶಾಲೆ ಪ್ರಥಮ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಹಾಗೂ ಸಂತ ಜೋಸೆರ ಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡರು. ವಿಜೇತರಿಗೆ ಜಿಲ್ಲಾ ಉಸ್ತವಾರಿ ಸಚಿವ ಕೆ.ವೆಂಕಟೇಶ್ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
‘ಕನ್ನಡದಲ್ಲಿ ಕವಾಯತು’
77 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪೊಲೀಸರು ಕನ್ನಡದಲ್ಲಿ ಕವಾಯತು ಆಜ್ಞೆ ನೀಡುವ ಮೂಲಕ ಕನ್ನಡ ಅಭಿಮಾನ ಮೆರೆದಿದ್ದಾರೆ. ಪಥ ಸಂಚಲನ ಹಾಗೂ ನಿರ್ಗಮನಕ್ಕೆ ಸಚಿವರಲ್ಲಿ ಕನ್ನಡದಲ್ಲೇ ಅನುಮತಿ ಕೋರಿ, ಸಂಪೂರ್ಣವಾಗಿ ಕವಾಯತು ಸಂದರ್ಭದಲ್ಲಿ ನಿರ್ದೇಶನ ನೀಡಿದ್ದಾರೆ. ಪೊಲೀಸರ ಕನ್ನಡ ಬಳಕೆ ಅಪಾರ ಮೆಚ್ಚುಗೆಗೆ ಕಾರಣವಾಯಿತು.