ಚಾಮರಾಜನಗರ: ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 87ನೇ ಜಯಂತಿ ಅಂಗವಾಗಿ ಫೆ.13ರಂದು ಸಾವಯವ ರೈತ ಸಂತೆ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾಹಿತಿ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ನಮ್ದು ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕಂಡ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಗ್ರಾಮ ಸ್ವರಾಜ್ಯಕ್ಕಾಗಿ ವಿಶ್ವ ರೈತ ನೇರ ಮಾರುಕಟ್ಟೆ ದಿನವಾಗಿ ಆಚರಣೆ ಮಾಡುತ್ತಿದ್ದು, ಅಂದು ಬೆಳಗ್ಗೆ 10ರಿಂದ ಸಂಜೆ 8 ಗಂಟೆವರೆಗೆ ನಗರದ ನಮ್ಮು ಅಂಗಡಿ ಮುಂಭಾಗ ಸಾವಯವ ರೈತ ಸಂತೆ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಾಮರಾಜನಗರ, ಯಳಂದೂರು ತಾಲೂಕುಗಳ ರೈತರ ಸಂತೆ ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ 13ರಂದು ಇಲ್ಲಿ ಸಾವಯುವ ಪದಾರ್ಥಗಳಿಗೆ ಮಾತ್ರ ಆವಕಾಶ ಕಲ್ಪಿಸಲಾಗುತ್ತದೆ. ಅಲ್ಲದೆ ಪ್ರತಿ ತಿಂಗಳ 20 ರಂದು ಕೊಳ್ಳೇಗಾಲದ ಡಾ.ಶ್ರೀ ಶಿವಕುಮಾರಸ್ವಾಮಿ ನಗರ, 26ರಂದು ಹನೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗ, 6ರಂದು ಗುಂಡ್ಲುಪೇಟೆಯ ಖಾಸಗಿ ಬಸ್ ನಿಲ್ದಾಣ ಎದುರಿನ ರಂಗಮಂದಿರದಲ್ಲಿ ರೈತ ಸಂತೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಹೋಬಳಿ ಕೇಂದ್ರಗಳಲ್ಲಿ ಗ್ರಾಮೀಣ ಸಂತೆ ಆಯೋಜಿಸಲಾಗುವುದು ಎಂದು ಹೇಳಿದರು.
ಈ ಸಾವಯವ ಸಂತೆಯಲ್ಲಿ ಎಂಡಿಎನ್ ಪ್ರತಿಷ್ಠಾನದ ಪ್ರಶಸ್ತಿಯನ್ನು ಡಿಸಿಎಫ್ ಆಗಿದ್ದ ಏಡುಕುಂಡಲು ಅವರಿಗೆ ಪ್ರದಾನ ಮಾಡಲಾಗುವುದು. ಬೆಳಗಾವಿಯ ಸಾವಯವ ಕೃಷಿಕ ಸುರೇಶ್ ಬಿ.ದೇಸಾಯಿ, ಜಿಲ್ಲಾಕಾರಿ ಡಿ.ಎಸ್.ರಮೇಶ್, ಜಿಪಂ ಸಿಇಒ ಪೂವಿತಾ, ಎಸ್ಪಿ ಪದ್ಮಿನಿ ಸಾಹು, ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರದ ಸದಸ್ಯ ಕಾರ್ಯದರ್ಶಿ ಎಂ.ಶೀಧರ್ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರೈತ ಸಂತೆಯಲ್ಲಿ ರೈತರೇ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ನಾಟಿ ತಳಿ ಬೀಜಗಳನ್ನು ನೇರವಾಗಿ ರೈತರಿಗೆ ಕೊಡುವ ವ್ಯವಸ್ಥೆ ಇದೆ. ರೈತ ಸಂತೆಯು ರಾಸಾಯನಿಕ ಮುಕ್ತ ಸಾವಯವ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿರುವ ರೈತರ ವಿಶೇಷ ಮಾರುಕಟ್ಟೆಯಾಗಿದೆ. ಬೀಜದಿಂದ ಮಾರುಕಟ್ಟೆವರೆಗೆ ರೈತರನ್ನು ಸ್ವಾವಲಂಬನೆ ಕಡೆಗೆ ಕರೆದೊಯ್ಯುವ ಸಮಾನ ಮನಸ್ಕರ ವೇದಿಕೆಯಾಗಿದೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್ ಮಾತನಾಡಿ, ಕೃಷಿ ಪ್ರವಾಸೋದ್ಯಮ ಉತ್ತೇಜನಕ್ಕೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಪ್ರೋತ್ಸಾಹಧನ ನೀಡಿದರೆ ಅನುಕೂಲವಾಗಲಿದೆ. ಗುಡಿ ಕೈಗಾರಿಕೆಗಳನ್ನು ಪೋಷಿಸುವುದರ ಮೂಲಕ ಹಳ್ಳಿಗಳನ್ನು ಸುಸ್ಥಿರ ಮತ್ತು ಸ್ವಮರ್ಯಾದೆಯ ಘಟಕಗಳನ್ನಾಗಿಸುವ ಉದ್ದೇಶ ಹೊಂದಲಾಗಿದೆ. ರೈತರು ಹಳ್ಳಿಗಳಲ್ಲಿ ಸುಸ್ಥಿರವಾಗಿ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಂದಕೆರೆ ಸಂಪತ್ತು, ಹನೂರು ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ನಮ್ದು ಮಳಿಗೆ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಇದ್ದರು.