

ಚಾಮರಾಜನಗರ: ಬಸವಾದಿ ಶರಣರ ತತ್ವ ಅದರ್ಶಗಳನ್ನು ಪಾಲನೆ ಮಾಡುವ ಜತೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಅಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸಿ ಎಂದು ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀ ಚನ್ನಬಸವಸ್ವಾಮೀಜಿ ತಿಳಿಸಿದರು.
ನಗರದ ಅನುಭವ ಮಂಟಪದಲ್ಲಿ ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ಸಂಗಮ ಗೃಹ ನಿರ್ಮಾಣ ಸಹಕಾರ ಸಂಘಗಳ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಸವಾದಿ ಶರಣರು ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಂಸ್ಕೃತಿ ಮತ್ತು ಧರ್ಮವನ್ನು ಪಾಲನೆ ಮಾಡುವಂತೆ ಹೇಳಿ ಹೋಗಿದ್ದಾರೆ. ಇಂಥ ಶರಣರ ಪರಂಪರೆಯನ್ನು ಹೊಂದಿರುವ ನಾವೆಲ್ಲರು ಅವರ ತತ್ವ ಅದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜವನ್ನು ನಿಮಾಣ ಮಾಡಲು ಮುಂದಾಗಬೇಕಾಗಿದೆ. ನಮ್ಮ ಮಕ್ಕಳು ಹಾಗೂ ಸಮಾಜಕ್ಕೆ ವೀರಶೈವ ಲಿಂಗಾಯತ ಧರ್ಮದ ಪರಂಪರೆ ಮತ್ತು ಮಹತ್ವದ ಬಗ್ಗೆ ತಿಳಿಸುವ ಮೂಲಕ ಅವರನ್ನು ಜಾಗೃತರನ್ನಾಗಿ ಮಾಡಬೇಕು ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಯುವ ಜನಾಂಗ ದಾರಿ ತಪ್ಪುತ್ತಿದ್ದಾರೆ. ಇಂಥವರಿಗೆ ಸೂಕ್ತ ಮಾರ್ಗದರ್ಶನ ಮಾಡುವುದರ ಮೂಲಕ ಸರಿದಾರಿಗೆ ತರಬೇಕು. ಎಲ್ಲರು ಒಗ್ಗಟ್ಟಿನಿಂದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅರ್ಥಿಕ ಪ್ರಗತಿ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಹೆಚ್ಚು ಪ್ರಾಬಲ್ಯವನ್ನು ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ಮೂರು ಸಂಘಗಳು ಒಗ್ಗಟ್ಟಿನಿಂದ ಸಾಗುತ್ತಾ ಅಭಿವೃದ್ದಿಯತ್ತ ಸಾಗುತ್ತಿರುವುದು ಹೆಮ್ಮೆ ವಿಚಾರವಾಗಿದೆ ಎಂದು ಹೇಳಿದರು.
ನೌಕರರ ಸಂಘದ ಗೌರವಾಧ್ಯಕ್ಷ ಆರ್.ಎಂ.ಸ್ವಾಮಿ ಮಾತನಾಡಿ, ಮೂರು ಸಂಘಗಳು ಶಕ್ತಿ ಮೀರಿ ಬೆಳೆಯುವ ಮೂಲಕ ಸಮಾಜಕ್ಕೆ ಆಸ್ತಿಯಾಗಿವೆ. ಈಗಾಗಲೇ ನೌಕರರ ಸಂಘ 25 ವರ್ಷಗಳನ್ನು ಪೊರೈಸಿ ಬೆಳ್ಳಿ ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದೆ. ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಸ್ವಂತ ಕಟ್ಟಡವನ್ನು ಹೊಂದಿ ಜನಪರ ಯೋಜನೆಗಳೊಂದಿಗೆ ಷೇರುದಾರರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಸಕ್ತ ವರ್ಷದಲ್ಲಿ ನಿವೃತ್ತಿ ಹೊಂದಿದ 40 ಮಂದಿ ನಿವೃತ್ತ ನೌಕರರರು ಹಾಗೂ ಎಸ್‌ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕೂ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ 43 ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಮಾಜಿ ಅಧ್ಯಕ್ಷ ಡಾ. ಪರಮೇಶ್ವರಪ್ಪ, ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯೋಗ ಪ್ರಕಾಶ್, ಉಪಾಧ್ಯಕ್ಷ ಶಿವಣ್ಣ, ನಿಯೋಜಿತ ಅಧ್ಯಕ್ಷ ಗೌರಿಶಂಕರ್, ಉಪಾಧ್ಯಕ್ಷ ಕುಮಾರಸ್ವಾಮಿ, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಆರ್. ನಾಗಭೂಷನ್, ಉಪಾಧ್ಯಕ್ಷ ಜಿ.ಮಹದೇವಸ್ವಾಮಿ, ನಿಯೋಜಿತ ಅಧ್ಯಕ್ಷ ಗುರುಪಾದಸ್ವಾಮಿ, ಸುಂದರ್, ನೌಕರರ ಸಂಘದ ಉಪಾಧ್ಯಕ್ಷ ಮಹದೇವಸ್ವಾಮಿ,ಗಂಗಾಧರ್ ಹಾಗೂ ಇತರರು ಹಾಜರಿದ್ದರು.