ಸಿಮ್ಸ್‌ನಲ್ಲಿ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಕಾರ್ಯಾಲಯ

12chn5
Published on

ಚಾಮರಾಜನಗರ: ನಗರದ ಹೊರವಲಯದ ಯಡಬೆಟ್ಟದ ತಪ್ಪಲಿನಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಬೋಧನಾ ಆಸ್ಪತ್ರೆಯಲ್ಲಿ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಕಾರ್ಯಾಲಯ ಆರಂಭಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಶನಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಈ ಹಿಂದೆ ಇದ್ದ ಕೇಂದ್ರದ 2 ಸಣ್ಣ ಕಚೇರಿಗಳಲ್ಲಿ ಸ್ಥಳವಕಾಶದ ಕೊರತೆಯಿತ್ತು. ಈ ಹಿನ್ನೆಲೆಯಲ್ಲಿ ಹೊಸ ದೊಡ್ಡದಾದ ಕೊಠಡಿಯಲ್ಲಿ ಕೇಂದ್ರದ ಕಾರ್ಯಾಲಯ ಆರಂಭಿಸಲು ಚಾಲನೆ ನೀಡಿದ್ದೇನೆ ಎಂದು ತಿಳಿಸಿದರು. ಕಾರ್ಯಾಲಯಕ್ಕೆ ಬೇಕಿರುವ ಹೆಚ್ಚುವರಿ ಪೀಠೋಪಕರಣಗಳು, ಇತರೆ ಸೌಲಭ್ಯಗಳಿಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಖನಿಜ ಪ್ರತಿಷ್ಠಾನದಿಂದ 30 ಲಕ್ಷ ರೂ. ಮತ್ತು ಅಂಗವಿಕಲರಿಗೆ ಮೀಸಲಿಡುವ ಅನುದಾನದ ಪೈಕಿ ಶೇ.5ನ್ನು ಬಳಸಿ ಕಾರ್ಯಾಲಯವನ್ನು ಪ್ರಾರಂಭಿಸಲು ಅವಕಾಶ ನೀಡಲಾಗಿದೆ ಎಂದರು.

ಮೂಲಸೌಕರ್ಯಗಳನ್ನು ಕಲ್ಪಿಸುವ ಕೆಲಸ ಗುಣಮಟ್ಟದಿಂದ ಕೂಡಿರಬೇಕು. ಪೀಠೋಪಕರಣ ಮತ್ತು ಇತರೆ ವಸ್ತುಗಳು ಸಹ ಉತ್ತಮವಾಗಿ ಇರಬೇಕು. ಈ ನಿಟ್ಟಿನಲ್ಲಿ ಆಸ್ಪತ್ರೆಯ ನಿರ್ದೇಶಕರು, ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸೂಚಿಸಿದರು. ನಂತರ ಆಸ್ಪತ್ರೆಯ ಸಮೀಪ ನಿರ್ಮಾಣಗೊಂಡು ಉದ್ಘಾಟನೆಗೆ ಸಜ್ಜಾಗಿರುವ ಗಾಂಧಿ ಭವನವನ್ನು ವೀಕ್ಷಣೆ ಮಾಡಿದರು. ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ 3 ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಾಣವಾಗಿದ್ದು, ಸಭಾಂಗಣ, ಗ್ರಂಥಾಲಯ, ಕಾಂಪೌಂಡ್ ಕಾಮಗಾರಿಗಳನ್ನು ಪರಿಶೀಲಿಸಿದರು.

ಪ್ರಭಾರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುರೇಶ್, ಜಿಲ್ಲಾ ಸರ್ಜನ್ ಡಾ.ಕೃಷ್ಣಪ್ರಸಾದ್, ಗ್ರೀನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಪ್ರಭುಸ್ವಾಮಿ, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಸಮಿತಿ ಅಧ್ಯಕ್ಷ ರಮೇಶ್, ಜಿಲ್ಲಾ ಅಂಗವಿಕಲರ ಸಲಹಾ ಸಮಿತಿ ಸದಸ್ಯ ಸಿದ್ದಯ್ಯ, ಉಮೇಶ್, ಮಹದೇವಸ್ವಾಮಿ, ಇಂಜಿನಿಯರ್ ಭೀಮ್‌ಸಾಗರ್,ರವೀಂದ್ರ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net