

ಕೊಳ್ಳೇಗಾಲ: ತಾಲೂಕಿನ ಹಳೇ ಹಂಪಾಪುರ ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದೆ. ಗುರುವಾರ ಬಿದ್ದ ಮಳೆಗೆ ರಸ್ತೆ ಕೆಸರುಗದ್ದೆಯಾಗಿ ಮಾರ್ಪಟಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಕಾಮಗಾರಿಗೆ ಮಾ.19 ರಂದು ಅಂದಿನ ಶಾಸಕರು ಚಾಲನೆ ನೀಡಿದ್ದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಸುಮಾರು 1200 ಮೀ. ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯನ್ನು ನಡೆಸುವ ಜವಾಬ್ದಾರಿಯನ್ನು ಗುತ್ತಿಗೆದಾರ ಮಂಜುನಾಥ್ ಎಂಬುವರು ವಹಿಸಿಕೊಂಡಿದ್ದಾರೆ.
ಜೂ.15ರ ಬಳಿಕ ಗುತ್ತಿಗೆದಾರ, ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲು ಹಿಂದೆ ಇದ್ದ ಹಳೇ ಡಾಂಬರು ರಸ್ತೆಯನ್ನು ಕಿತ್ತು ಹಾಕಿದ್ದರು. ಈ ವೇಳೆ ರಸ್ತೆಯ ಎರಡು ಬದಿಗಳಲ್ಲೂ ಮಣ್ಣು ಹಾಕಿಸಿದರು. ಆರಂಭದಲ್ಲಿ ಜರೂರಾಗಿ ಕೆಲಸ ನಡೆದಿದ್ದು. 10 ದಿನಗಳ ಬಳಿಕ ಸ್ಥಗಿತಗೊಂಡಿದೆ. ರಸ್ತೆಯ ಎರಡು ಬದಿಗಳಲ್ಲೂ ಮಣ್ಣು ಹಾಕಿಸಿರುವುದರಿಂದ ಸ್ವಲ್ಪ ಮಳೆ ಬಿದ್ದರೆ ದ್ವಿಚಕ್ರ ವಾಹನಗಳು, ಆಟೋಗಳು ಗ್ರಾಮಕ್ಕೆ ಹೋಗಲು, ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಿದ್ದರೆ ಕೆರೆಯಂತೆ ಕಾಣುವ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ನಿತ್ಯವೂ ಗ್ರಾಮಸ್ಥರು ಪಟ್ಟಣಕ್ಕೆ ಬರಲು ಈ ರಸ್ತೆಯನ್ನೆ ಅವಲಂಬಿಸಿದ್ದಾರೆ. ದ್ವಿಚಕ್ರ ವಾಹನ ಸವಾರರು ಜೀವ ಭಯದಲ್ಲಿ ತೆರಳುವ ಪರಿಸ್ಥಿತಿ ಇದೆ. ಅಂತೆಯೇ, ರಸ್ತೆಯಲ್ಲಿ ತೆರಳುವಾಗ ನಿಯಂತ್ರಣ ತಪ್ಪಿ ಬೈಕ್ ಸವಾರರು ಬಿದ್ದ ಪ್ರಸಂಗವೂ ನಡೆದಿದೆ.
ಪಟ್ಟಣದಲ್ಲಿರುವ ಶಾಲಾ-ಕಾಲೇಜುಗಳಿಗೆ ಮಕ್ಕಳು ಆತಂಕದಲ್ಲೆ ಹೋಗಬೇಕಿದೆ. ಸೈಕಲ್ ಸವಾರರಂತು ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿಯೇ ಹೋಗಬೇಕಿದೆ. ವಯೋವೃದ್ಧರು, ರೋಗಿಗಳನ್ನು ಆಸ್ಪತ್ರೆಗೆ ಸಕಾಲಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಇವೆಲ್ಲ ಸಮಸ್ಯೆಗಳಿಗೆ ಒಳಗಾದ ಗ್ರಾಮಸ್ಥರು ರಸ್ತೆ ಅಭಿವೃದ್ಧಿ ಜವಾಬ್ದಾರಿ ತೆಗೆದುಕೊಂಡವರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಅಂತೆಯೇ, ಗುರುವಾರ ಸಂಜೆ ಬಿದ್ದ ಮಳೆಗೆ ರಸ್ತೆಯ ತುಂಬೆಲ್ಲ ನೀರು ತುಂಬಿಕೊಂಡಿತ್ತು. ರಸ್ತೆಯಲ್ಲಿ ಜನ ತಿರುಗಾಡಲು ಸಾಧ್ಯವಾಗದೆ ಪಡಿಪಾಟಿಲು ಪಡುವಂತಾಯಿತು. ಗ್ರಾಮದ ಯುವಕರು ರಸ್ತೆಯ ಇಕ್ಕೆಲಗಳಲ್ಲಿ ಹಾಕಲಾಗಿದ್ದ ಮಣ್ಣನ್ನು ಸಡಿಲಗೊಳಿಸಿ ನೀರು ಸರಾಗವಾಗಿ ಬೇರೆ ಕಡೆ ಹರಿವಂತೆ ಮಾಡಿದ್ದಾರೆ. ಇದರಿಂದ ಸ್ವಲ್ಪಮಟ್ಟಿಗೆ ಜನರು ತಿರುಗಾಡುವಂತಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರ ನಿರ್ಲಕ್ಷ್ಯಕ್ಕೆ ಅಮಾಯಕ ಜನರು ಕಷ್ಟಪಡಬೇಕಾಗಿದೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಈ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿದೆ.
ಕಳೆದ ಎರಡು ದಿನಗಳ ಹಿಂದಷ್ಟೆ ಹಳೇ ಹಂಪಾಪುರಕ್ಕೆ ಭೇಟಿ ನೀಡಿ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿದ್ದೇವೆ. ಗುತ್ತಿಗೆದಾರನಿಗೂ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸುವಂತೆ ಸೂಚನೆ ನೀಡಿದ್ದೇವೆ. ಇನ್ನೆರಡು ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗುತ್ತದೆ.ನಂದೀಶ್, ಕಾರ್ಯಪಾಲಕ ಇಂಜಿನಿಯರ್, ಪಿ.ಎಂ.ಜಿ.ಎಸ್.ವೈ. ಮೈಸೂರು ಮುಳ್ಳೂರು ಮುಖ್ಯ ರಸ್ತೆಯಿಂದ ಹಳೇ ಹಂಪಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ರಸ್ತೆ ಅಭಿವೃದ್ಧಿಗೆ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸಲು ಇರುವ ರಸ್ತೆಯನ್ನು ಕಿತ್ತು ಹಾಕಿದ್ದರು. ಇದೀಗ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ಮಳೆ ಬಂದರೆ ರಸ್ತೆಯಲ್ಲಿ 1 ಅಡಿ ನೀರು ನಿಲ್ಲುತ್ತದೆ. ಸಂಚಾರಕ್ಕೆ ತೊಂದರೆ ಆಗಿದೆ.ಎಸ್.ರಮೇಶ್, ಗ್ರಾಮಸ್ಥ, ಹಳೇ ಹಂಪಾಪುರ