ಚಾ.ನಗರ ವಿವಿ ಸಮಸ್ಯೆಗೆ ಪುಟ್ಟರಂಗಶೆಟ್ಟಿ ಸ್ಪಂದನೆ

IMG-20230811-WA0052
Published on

ಚಾಮರಾಜನಗರ : ಚಾ.ನಗರ ವಿಶ್ವವಿದ್ಯಾಲಯದಲ್ಲಿ ಉಂಟಾಗಿದ್ದ ನೀರಿನ ಸಮಸ್ಯೆ ಬಗೆಹರಿಸಿಕೊಡುವಂತೆ ಉಪನ್ಯಾಸಕರ ನಿಯೋಗ ಸಲ್ಲಿಸಿದ್ದ ಮನವಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ತಕ್ಷಣವೇ ಸ್ಪಂದನೆ ನೀಡಿದ್ದಾರೆ.

ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಶಾಶ್ವತ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಚಾಮರಾಜನಗರ-ನಂಜನಗೂಡು ಮುಖ್ಯರಸ್ತೆಯಿಂದ ವಿಶ್ವವಿದ್ಯಾಲಯದವರೆಗೆ ನೀರು ಪೂರೈಸುವ ಕಾಮಗಾರಿಗೆ ಚಾಲನೆ ನೀಡಿ 10 ಲಕ್ಷ ರೂ. ಅನುದಾನ ಬಿಡುಗಡೆಯಾಗಿ 6 ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭವಾಗಿರಲಿಲ್ಲ. ಈ ಸಂಬಂಧ ವಿಶ್ವವಿದ್ಯಾನಿಲಯದ ಡಾ.ಕುಮಾರ್ ಎಂ.ಚಿಕ್ಕಹೊಳೆ ನೇತೃತ್ವದಲ್ಲಿ ಉಪನ್ಯಾಸಕರ ನಿಯೋಗ ಪ್ರವಾಸಿಮಂದಿರದಲ್ಲಿ ಶುಕ್ರವಾರ ಶಾಸಕರನ್ನು ಭೇಟಿ ಮಾಡಿ ವಿವಿಯಲ್ಲಿರುವ ನೀರಿನ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಲಾಯಿತು.
ಸಮಸ್ಯೆಯನ್ನು ಆಲಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸಿದರು. ಬಳಿಕ ಮಾತನಾಡಿ, ವಿಶ್ವವಿದ್ಯಾಲಯಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ಶೀಘ್ರದಲ್ಲೇ ಕಲ್ಪಿಸಿಕೊಡುತ್ತೇನೆ. ಸದ್ಯಕ್ಕೆ ಕೊಳವೆಬಾವಿ ನಿರ್ಮಿಸಲಾಗುತ್ತದೆ. ವಿದ್ಯಾರ್ಥಿಗಳ ಎಲ್ಲ ಬೇಡಿಕೆಗಳನ್ನು ಪೂರೈಸುವುದಾಗಿ ಭರವಸೆ ನೀಡಿದರು.

ಈ ವೇಳೆ ಇಂಜಿನಿಯರ್ ಜಗದೀಶ್ ಅವರನ್ನು ಸ್ಥಳಕ್ಕೆ ಕರೆಸಿ ಕಾಮಗಾರಿ ವಿಳಂಬವಾಗಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. ಹತ್ತು ದಿನಗಳೊಳಗೆ ಕುಡಿಯುವ ನೀರಿನ ಕಾಮಗಾರಿಯನ್ನು ಪೂರ್ಣಗೊಳಿಸಿಕೊಡಬೇಕು ಎಂದು ತಾಕೀತು ಮಾಡಿದರು. ಮುಖ್ಯರಸ್ತೆಯಲ್ಲಿ ಸಂಚರಿಸುವ ಬಸ್‌ಗಳು ವಿಶ್ವವಿದ್ಯಾನಿಲಯದಲ್ಲಿ ನಿಲ್ಲಿಸುತ್ತಿಲ್ಲ. ನೇರವಾಗಿ ಪಟ್ಟಣದಿಂದ ಮತ್ತು ನಂಜನಗೂಡಿನಿಂದ ವಿಶ್ವವಿದ್ಯಾನಿಲಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು. ತಕ್ಷಣ ನೀರಿನ ಸಮಸ್ಯೆ ಬಗೆಹರಿಯುವವರೆಗೂ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಿಕೊಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದರು.

ಕುಲಸಚಿವ(ಮೌಲ್ಯಮಾಪನ) ಪ್ರೊ.ಮಾದೇಶ್, ಬದನಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರ್, ಉಪನ್ಯಾಸಕ ಬಿ.ಗುರುರಾಜು ಯರಗನಹಳ್ಳಿ, ಡಾ.ಎಂ.ಬಿ.ಮಹೇಶ್, ಡಾ.ಮಹಾದೇವಮೂರ್ತಿ, ಚೇತನ್, ಚಾಮರಾಜು, ಕಚೇರಿ ಸಿಬ್ಬಂದಿ ಪ್ರಮೋದ್, ರಾಜೂಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net