

ಚಾಮರಾಜನಗರ: ನಗರದ ಲಾರಿ ನಿಲ್ದಾಣದ ಬಳಿ ನಗರೋತ್ಥಾನ ಮೂರನೇ ಹಂತದ ಅನುದಾನ 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಓವರ್‌ಹೆಡ್ ಟ್ಯಾಂಕ್ ಹಾಗೂ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ, ವಾರ್ಡ್ ಸದಸ್ಯರು, ನಗರಸಭೆ ಇಂಜಿನಿಯರ್ ಜತೆ ಇತ್ತೀಚೆಗೆ ತೆರಳಿ ಪರಿಶೀಲಿಸಿದರು.
ನಗರದ ನಾನಾ ವಾರ್ಡ್‌ಗಳಿಗೆ ತ್ವರಿತವಾಗಿ ನೀರು ಸರಬರಾಜು ಮಾಡುವ ಸಂಬಂಧ ಗುತ್ತಿಗೆದಾರರು ಆಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು. ಓದುಗರಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸಿಕೊಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರ ಆರಂಭಕ್ಕೂ ಒತ್ತು ನೀಡಬೇಕಿದೆ ಎಂದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಆಟೋ ನಿಲ್ದಾಣ, ಬಸ್ ತಂಗುದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕರು ಪರಿಶೀಲಿಸಿದರು. ನಗರಸಭೆ ಸದಸ್ಯ ಎಂ.ಮಹೇಶ್, ನಗರಸಭೆ ಎಇಇ ನಟರಾಜು, ಜೆಇ ಶಿವಶಂಕರ ಆರಾಧ್ಯ, ಕೇಶವಮೂರ್ತಿ ಗುತ್ತಿಗೆದಾರರು ಹಾಜರಿದ್ದರು.